ಬಲೂಚ್: ಸೋನಿಯಾ ಮೌನಕ್ಕೆ ಸುಷ್ಮಾ ತರಾಟೆ

ಶನಿವಾರ, 1 ಆಗಸ್ಟ್ 2009 (14:39 IST)
ಭಾರತ-ಪಾಕ್ ಜಂಟಿ ಹೇಳಿಕೆ ಕುರಿತಾದ ವಿವಾದಕ್ಕೆ ಸಂಬಂಧಿಸಿ ತೃಪ್ತಿಕರ ಉತ್ತರ ನೀಡಲು ಪ್ರಧಾನಿ ಮನಮೋಹನ್ ಸಿಂಗ್ ವಿಫಲರಾಗಿದ್ದಾರೆ ಎಂದು ಹೇಳಿರುವ ಬಿಜೆಪಿ, ಆ ಹೇಳಿಕೆಯಲ್ಲಿನ ಬಲೂಚಿಸ್ತಾನ ಮತ್ತಿತರ ಸಂಗತಿಗಳ ಬಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಮೌನವಾಗಿರುವುದು ಅಚ್ಚರಿ ಮೂಡಿಸಿದೆ ಎಂದಿದೆ.

ಗುರುವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಭಾಷಣದ ತುಣುಕನ್ನು ಉಲ್ಲೇಖಿಸಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಜಂಟಿ ಹೇಳಿಕೆಯಲ್ಲಿದ್ದ ವಿಷಯಗಳ ಬಗ್ಗೆ ಸೋನಿಯಾ ಮೌನ ತಾಳಿದ್ದಾರೆ. ಸಮಗ್ರ ಮಾತುಕತೆಯಿಂದ ಪ್ರಧಾನಿ ಅವರು ಭಯೋತ್ಪಾದನೆ ವಿಷಯವನ್ನು ಹೊರಗಿಟ್ಟಿದ್ದರೆ, ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಮಾತುಕತೆಯಿಲ್ಲ ಎಂದಷ್ಟೇ ಸೋನಿಯಾ ಅವರು ತನ್ನ ಸಂಸದರಿಗೆ ಹೇಳಿದ್ದಾರೆ ಎಂದರು.

ಬಲೂಚಿಸ್ತಾನ ಕುರಿತ ಉಲ್ಲೇಖದ ಬಗ್ಗೆ ಏನನ್ನೂ ಹೇಳದಿರುವುದೇ ಸರಿ ಎಂಬಂತೆ ಸೋನಿಯಾ ವರ್ತಿಸಿದ್ದಾರೆ ಎಂದು ಆರೋಪಿಸಿದ ಲೋಕಸಭೆಯ ಬಿಜೆಪಿ ಉಪನಾಯಕಿ ಸುಷ್ಮಾ, ಈ ವಿಷಯದ ಬಗ್ಗೆ ಕಾಂಗ್ರೆಸ್ ವಕ್ತಾರರೂ ಮೌನ ತಾಳಿರುವುದನ್ನು ನೋಡಿದರೆ, ಪ್ರಧಾನಮಂತ್ರಿ ಅವರು ತಮ್ಮ ಪಕ್ಷದವರಿಗೇ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದರೆ ಎಂಬಂತೆ ಕಾಣುತ್ತದೆ ಎಂದರು.

ಕಮ್ಯೂನಿಸ್ಟರಾಗಲೀ, ಕಾಂಗ್ರೆಸ್ ಅಧ್ಯಕ್ಷೆಯೇ ಆಗಲಿ ಮಾತ್ರವಲ್ಲದೆ ವಿರೋಧ ಪಕ್ಷಗಳೇ ಆಗಲಿ, ಯಾರು ಕೂಡ ಮನಮೋಹನ್ ಹೇಳಿಕೆಯಿಂದ ಸಂತೃಪ್ತರಾಗಿಲ್ಲ ಎಂದ ಸುಷ್ಮಾ, ವಿರೋಧ ಪಕ್ಷಗಳಿಗೆ ಸಮಾಧಾನಕರ ಉತ್ತರ ನೀಡುವಲ್ಲಿ ಮತ್ತು ದೇಶದ ಜನತೆಯ ಮನಸ್ಸಿನಲ್ಲಿರುವ ಸಂಶಯ ನಿವಾರಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ