ಬಾಬಾ ರಾಮದೇವ್‌ಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್-ಬಿಜೆಪಿ

ಗುರುವಾರ, 24 ಫೆಬ್ರವರಿ 2011 (08:58 IST)
ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದನೋರ್ವ ಯೋಗ ಗುರು ಬಾಬಾ ರಾಮದೇವ್ ಅವರನ್ನು ಬ್ಲಡಿ ಇಂಡಿಯನ್, ನಾಯಿ ಎಂದೆಲ್ಲ ತೆಗಳಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರದ ಕುರಿತು ನಮ್ಮ ಪಕ್ಷವನ್ನು ಮಾತ್ರ ಯಾಕೆ ಗುರಿ ಮಾಡುತ್ತಿರುವುದು ಎನ್ನುವುದು ಕಾಂಗ್ರೆಸ್ ಪ್ರಶ್ನೆ, ಅದೇ ಸರಿ ಎನ್ನುವುದು ಬಿಜೆಪಿ ಸಮರ್ಥನೆ.

ಭ್ರಷ್ಟಾಚಾರದ ವಿರುದ್ಧ 'ಭಾರತ್ ಸ್ವಾಭಿಮಾನ್' ಹೆಸರಿನಲ್ಲಿ ದೇಶವ್ಯಾಪಿ ಹೋರಾಟ ನಡೆಸುತ್ತಾ ಬಂದಿರುವ ರಾಮದೇವ್, ಕಪ್ಪುಹಣವನ್ನು ಭಾರತಕ್ಕೆ ಮರಳಿ ತರುವ ಸಂಬಂಧ ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸುತ್ತಾ ಬಂದಿದ್ದಾರೆ. ಹಾಡಹಗಲೇ ನಡೆಯುತ್ತಿರುವ ಹಗಲು ದರೋಡೆಗಳನ್ನು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ.

ಆದರೆ ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ನೀವು ನಮ್ಮ ಪಕ್ಷವನ್ನು ಮಾತ್ರ ಯಾಕೆ ಗುರಿ ಮಾಡುತ್ತಿದ್ದೀರಿ ಎಂದಿದ್ದಾರೆ.

'ಬಾಬಾ ರಾಮದೇವ್ ಅವರಂತೆ ನಾವು ಕೂಡ ಕಪ್ಪುಹಣದ ವಿರುದ್ಧದ ನಿಲುವು ಹೊಂದಿರುವವರು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎನ್ನುವುದೇ ನನ್ನ ಏಕೈಕ ಮನವಿ. ಯಾವುದೇ ರೀತಿಯಲ್ಲಿ ಪಕ್ಷಪಾತಿಯಾಗಿರಬಾರದು.

ಅವರು ಕೇವಲ ಒಂದು ರಾಜಕೀಯ ಪಕ್ಷವನ್ನಷ್ಟೇ ಗುರಿ ಮಾಡುತ್ತಿದ್ದಾರೆ. ನಾನು ಕೂಡ ಅವರಿಗೊಂದು ಸಲಹೆ ನೀಡುತ್ತಿದ್ದೇನೆ. ರಾಮದೇವ್ ತನ್ನ ಭಕ್ತರು ಅಥವಾ ಅನುಯಾಯಿಗಳಿಂದ ಹಣ ಸ್ವೀಕರಿಸುವ ಸಂದರ್ಭದಲ್ಲಿ, ಅದು ಕಪ್ಪುಹಣವಲ್ಲ ಎಂಬ ಬಗ್ಗೆ ಪುರಾವೆಗಳನ್ನು ಅವರು ಪಡೆದುಕೊಳ್ಳಲಿ' ಎಂದು ರಾಮದೇವ್‌ ಅವರನ್ನು ದಿಗ್ವಿಜಯ್ ಸಿಂಗ್ ಪರೋಕ್ಷವಾಗಿ ಚುಚ್ಚಿದರು.

ಕೆಲ ದಿನಗಳ ಹಿಂದಷ್ಟೇ ಅರುಣಾಚಲ ಪ್ರದೇಶದ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಅವರು, ರಾಮದೇವ್ ಅವರನ್ನು 'ಬ್ಲಡಿ ಇಂಡಿಯನ್ (ದರಿದ್ರ ಭಾರತೀಯ), ನಾಯಿ ಎಂದು ದೂಷಿಸಿದ್ದರು. ಯೋಗ ಕಾರ್ಯಕ್ರಮದಲ್ಲಿ ಸಂಸದ ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಾಮದೇವ್ ಅವರು ಕೇಂದ್ರ ಸರಕಾರವನ್ನು ಟೀಕಿಸಿದ್ದಕ್ಕೆ ಕೋಪಗೊಂಡು ಈ ರೀತಿ ಹರಿಹಾಯಲಾಗಿತ್ತು.

ಹಾಗಿದ್ದರೆ ರಾಮದೇವ್ ಅವರ ಆಸ್ತಿ-ಪಾಸ್ತಿ ಕುರಿತು ತನಿಖೆ ನಡೆಸುವ ಅಗತ್ಯವಿದೆಯೇ ಎಂದು ಸಿಂಗ್ ಅವರಲ್ಲಿ ಪತ್ರಕರ್ತರು ಪ್ರಶ್ನಿಸಿದರು.

ಇಂತಹ ವಿಚಾರಗಳ (ದೇಣಿಗೆ ಪಡೆಯುವುದು) ಕುರಿತು ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಕ್ರಮಗಳಿವೆ. ಅದನ್ನು ಅವರು ಕೂಡ ಅನುಸರಿಸಬೇಕು. ಹಾಗೊಂದು ವೇಳೆ ರಾಮದೇವ್ ಅವರು ಕೊಡುಗೆಯ ರೀತಿಯಲ್ಲಿ ಕಪ್ಪುಹಣವನ್ನು ಸ್ವೀಕರಿಸಿದರೆ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡ ತೋರಿಸಬೇಕಾಗುತ್ತದೆ ಎಂದರು.

ರಾಮದೇವ್ ಅವರನ್ನು ಟೀಕಿಸಿರುವ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು, ಆರೋಪ ಮಾಡುವುದೇ ರಕ್ಷಣೆಗೆ ಅತ್ಯುತ್ತಮ ಅಸ್ತ್ರ ಎಂಬ ನೀತಿಯನ್ನು ಕಾಂಗ್ರೆಸ್ ಸ್ವೀಕರಿಸಿದೆ. ಯಾರಾದರೂ ಯಾವುದಾದರೂ ವಿಚಾರದ ಕುರಿತು ಅವರ (ಕಾಂಗ್ರೆಸ್) ವಿರುದ್ಧ ದನಿಯೆತ್ತಿದಾಗ, ಆ ವ್ಯಕ್ತಿಗಳ ಮೇಲೆಯೇ ದಾಳಿ ನಡೆಸಲು ಆರಂಭಿಸುತ್ತಾರೆ ಎಂದರು.

ಬಾಬಾ ರಾಮದೇವ್ ಕಪ್ಪುಹಣ ಹೊಂದಿದ್ದಾರೆ ಎಂಬ ಪೊಳ್ಳು ಆರೋಪಗಳನ್ನು ಅವರು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನದ್ದೇ ಸರಕಾರವಿದೆ. ರಾಮದೇವ್ ಅವರ ಕಪ್ಪುಹಣದ ಬಗ್ಗೆ ಅದೇನು ಕ್ರಮ ತೆಗೆದುಕೊಂಡಿದೆ ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ