ಬಾಬ್ರಿ ಮಸೀದಿ ಧ್ವಂಸ ಭಾರತದಲ್ಲಿನ ಭಯೋತ್ಪಾದನೆ ಕಾರಣ : ಅಜಮ್ ಖಾನ್

ಸೋಮವಾರ, 31 ಮಾರ್ಚ್ 2014 (18:59 IST)
"ಅಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಭಾರತದಲ್ಲಿ ಭಯೋತ್ಪಾದನೆಗೆ ಕಾರಣವಾಗಿದೆ" ಎಂದು ಉತ್ತರ ಪ್ರದೇಶ ನಗರಾಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಅಜಮ್ ಖಾನ್ ಹೇಳಿದ್ದಾರೆ.
PR

ಫೈಜಾಬಾದ್ ನಗರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಹಿರಿಯ ನಾಯಕರಾದ ಖಾನ್, ಡಿಸೆಂಬರ್ 06, 1992ರಲ್ಲಿ ನಡೆದ ಮಸೀದಿ ಧ್ವಂಸವನ್ನು ಪ್ರಸ್ತಾಪಿಸಿದ್ದಾರೆ.

"ಅಯೋಧ್ಯೆಯಲ್ಲಿ ಈ ದುರದೃಷ್ಟಕರ ಘಟನೆ ನಡೆಯುವವರೆಗೆ ಯಾರೂ ಕೂಡ ಎಕೆ 47, RDX ಮತ್ತು ಭಯೋತ್ಪಾದನೆಯ ಬಗ್ಗೆ ಕೇಳಿರಲಿಲ್ಲ" ಎಂದು ಖಾನ್ ಹೇಳಿದ್ದಾರೆ.

"ಕೋಮುವಾದಿಗಳ ಈ ಕ್ರಮದ ಪರಿಣಾಮವನ್ನು ದೇಶ ಎರಡು ದಶಕಗಳ ನಂತರವೂ ಅನುಭವಿಸುತ್ತಿದೆ" ಎಂದು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್‌ರ ಆಪ್ತರಾದ ಖಾನ್ ದೂರಿದ್ದಾರೆ.

"ಭಾರತೀಯ ಜನತಾ ಪಕ್ಷದ (ಬಿಜೆಪಿ) ನಂತಹ "ಫ್ಯಾಸಿಸ್ಟ್ ಪಡೆಗಳು" ಮುಗ್ಧ ಜನರಿಗೆ ಬಾಂಬ್‌ಗಳನ್ನು ಮತ್ತು ಬಂದೂಕುಗಳನ್ನು ಹಸ್ತಾಂತರಿಸುವ ಕೆಲಸವನ್ನು ಮಾಡುತ್ತಿವೆ. ಬಾಬ್ರಿ ಘಟನೆಯ ತರುವಾಯ ಹಿಂದುಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಬೀಜಗಳು ಬಿತ್ತಲ್ಪಟ್ಟವು" ಎಂದು ಖಾನ್ ಆರೋಪಿಸಿದ್ದಾರೆ.

ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ವಿಜಯ್ ಬಹಾದೂರ್ ಪಾಠಕ್, "ಖಾನ್ ಅವರಿಂದ ಉತ್ತಮವಾದುದೇನನ್ನು ಅಪೇಕ್ಷಿಸುವ ಹಾಗಿಲ್ಲ. ಎರಡು ವರ್ಷಗಳಿಂದ ಸ್ವತಃ ಅವರ ಪಕ್ಷಕ್ಕೆ ಖಾನ್ ತಲೆನೋವಾಗಿದ್ದಾರೆ" ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ