ಬಿಎಸ್‌ಪಿ ಮಾಜಿ ಮುಖಂಡ ಸರ್ವೇಶ್ ಸಿಂಗ್‌ಗೆ ಗುಂಡಿಕ್ಕಿ ಹತ್ಯೆ

ಶುಕ್ರವಾರ, 19 ಜುಲೈ 2013 (13:14 IST)
ಅಜಮ್‌ಗಢ್: ಉತ್ತರಪ್ರದೇಶದ ಅಜಮ್‌ಗಢ್‌ನಲ್ಲಿ ಮೂವರು ಅಜ್ಞಾತ ವ್ಯಕ್ತಿಗಳು ಮಾಜಿ ಶಾಸಕ ಮತ್ತು ಬಿಎಸ್‌ಪಿ ಮುಖಂಡ ಸರ್ವೇಶ್ ಸಿಂಗ್ ಸೀಪು ಎಂಬವರನ್ನು ಶುಕ್ರವಾರ ಬೆಳಿಗ್ಗೆ ಹಾಡಹಗಲೇ ಗುಂಡಿಟ್ಟು ಹತ್ಯೆ ಮಾಡಿದ ದಾರುಣ ಘಟನೆ ಸಂಭವಿಸಿದೆ. ದಾಳಿಕೋರರು ಗುಂಡು ಹಾರಿಸಿದ ಬಳಿಕ ಮೋಟಾರ್‌ಸೈಕಲ್‌ಗಳನ್ನು ಏರಿ ಪರಾರಿಯಾದರು.

ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮೂಡಿದ್ದು, ಆಕ್ರೋಶಪೂರಿತ ಸ್ಥಳೀಯರು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು. ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಭಾರಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದೆ. 35 ವರ್ಷ ವಯಸ್ಸಿನ ಸೀಪು 2012ರವರೆಗೆ ಸಾಗರಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಶಾಸಕರಾಗಿದ್ದರು. ಹತ್ಯೆಯ ಬಳಿಕ ಅಜಮ್‌ಗಡ್‌ನಲ್ಲಿ ಹಿಂಸಾಚಾರ ಸ್ಫೋಟಿಸಿದ್ದು, 50 ಜನರು ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಪ್ರತಿಭಟನೆಕಾರರು ಪೊಲೀಸರ ಬಂದೂಕುಗಳನ್ನು ಕಸಿದುಕೊಂಡಿದ್ದರಿಂದ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ ಎಂದು ಹೇಳಲಾಗಿದೆ.ಆರಂಭದ ವರದಿಗಳ ಪ್ರಕಾರ, ಕುಟುಂಬದ ವೈರತ್ವ ಈ ಹತ್ಯೆಗೆ ಕಾರಣವೆಂದು ಹೇಳಲಾಗಿದೆ. ಬಿಎಸ್‌ಪಿಯನ್ನು ತ್ಯಜಿಸಿದ ಸರ್ವೇಶ್ ಕಾಂಗ್ರೆಸ್ ಅಥವಾ ಬಿಜೆಪಿಯ ಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ