ಬಿಜೆಪಿ ಕಾರ್ಯಕಾರಿಣಿಯಲ್ಲಿ ನಾಯಕರ ಜಟಾಪಟಿ

ಭಾನುವಾರ, 21 ಜೂನ್ 2009 (18:01 IST)
ಚುನಾವಣಾ ಸೋಲಿನ ಆತ್ಮಾವಲೋಕನಕ್ಕಾಗಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಭಾನುವಾರ ಮುಕ್ತಾಯಗೊಂಡಿತು. ಭಾನುವಾರ ನಡೆದ ಮುಕ್ತ ಚರ್ಚೆಯ ವೇಳೆಗೆ ಮನೇಕಾ ಗಾಂಧಿ ಹಾಗೂ ಪಕ್ಷದ ಮುಸ್ಲಿಂ ಮುಖಗಳಾದ ಶಾನವಾಜ್ ಹುಸೇನ್ ಹಾಗೂ ಮುಕ್ತಾರ್ ಅಬ್ಬಾಸ್ ನಕ್ವಿ ಅವರುಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು.

ಹುಸೇನ್ ಅವರು ಪಕ್ಷದ ಆಂತರಿಕ ವಿಚಾರಗಳು ಮಾಧ್ಯಮಗಳಿಗೆ ಸೋರಿಕೆಯಾಗುತ್ತಿರುವ ಕುರಿತು ತಮ್ಮ ಅಸಂತುಷ್ಟಿಯನ್ನು ವ್ಯಕ್ತಪಡಿಸಿದ ವೇಳೆ ವಾಗ್ಯುದ್ಧ ಆರಂಭಗೊಂಡಿತು. ಹುಸೇನ್ ಅವರು ಮಾಧ್ಯಮಗಳಿಗೆ ಆಂತರಿಕ ವಿಚಾರಗಳು ಸೋರಿಕೆಯಾಗುತ್ತಿದೆ ಅನ್ನುತ್ತಿರುವಾಗ ಎದ್ದು ನಿಂತ ಮನೇಕಾ ಗಾಂಧಿ, ಹುಸೇನ್ ಅವರೇ ಪಕ್ಷದ ವಿಚಾರಗಳನ್ನು ಮಾಧ್ಯಮಗಳೊಂದಿಗೆ ಚರ್ಚಿಸುವುದು ಎಂದು ಆರೋಪಿಸಿದರು. ಇಷ್ಟರಲ್ಲಿ ಹುಸೇನ್ ರಕ್ಷಣೆಗೆ ಮುಂದಾದ ನಕ್ವಿ, ಮನೇಕಾ ಅವರು ಶನಿವಾರವೇ ಬೇಕಾದಷ್ಟು ಮಾತನಾಡಿದ್ದಾರೆ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಮೂವರು ನಾಯಕರನ್ನು ಸಮಾಧಾನಗೊಳಿಸಲು ಯತ್ನಿಸಿದ್ದು, ತನ್ನ ಸರದಿಯಲ್ಲದ ಕಾರಣ ಮನೇಕ ಮಾತಾಡಬಾರದು ಎಂದು ಹೇಳಿದರು.

ಈ ಇಬ್ಬರು ಮುಸ್ಲಿಂ ನಾಯಕರು, ಉತ್ತರ ಪ್ರದೇಶದಲ್ಲಿ ಮತಗಳ ಧ್ರುವೀಕರಣಕ್ಕೆ ವರುಣ್ ಗಾಂಧಿ ಅವರ ಪ್ರಚೋದನಕಾರಿ ಭಾಷಣವೇ ಕಾರಣವೇ ಎಂದು ದೂರಿದ್ದರು. ತನ್ನ ಪುತ್ರನ ಮೇಲೆ ಗೂಬೆ ಕೂರಿಸುತ್ತಿರುವುದನ್ನ ಪ್ರತಿಭಟಿಸಿದ ಮನೇಕಾ, ಇದಕ್ಕೆ ತನ್ನ ಪುತ್ರನನ್ನು ಬಲಿಪಶುವಾಗಿಸಬಾರದು ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೆ, ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿದ್ದ ಅರುಣ್ ಜೇಟ್ಲಿ ಕಾರಣ, ಅವರು ಯಾವುದೇ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ ಎಂದು ಶನಿವಾರ ದೂರಿದ್ದರು.

ವೆಬ್ದುನಿಯಾವನ್ನು ಓದಿ