ಬಿಜೆಪಿ ವಿರುದ್ಧದ ಕೇಜ್ರಿವಾಲ್ ಆರೋಪಕ್ಕೆ ಬಿಹಾರದ ಮುಖ್ಯಮಂತ್ರಿಯ ಅನಿರೀಕ್ಷಿತ ಬೆಂಬಲ

ಬುಧವಾರ, 19 ಫೆಬ್ರವರಿ 2014 (12:55 IST)
PTI
ತನ್ನ ಮಾಜಿ ಮಿತ್ರಪಕ್ಷ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ನಾಯಕರು ಭಾರತದ ಶ್ರೀಮಂತ ವ್ಯಕ್ತಿ, ಕೈಗಾರಿಕೋದ್ಯಮಿ ಮುಖೇಶ ಅಂಬಾನಿಗೆ ತುಂಬಾ ಹತ್ತಿರದಲ್ಲಿದ್ದಾರೆ ಮತ್ತು ಆತನಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳುವ ಮೂಲಕ ಕೇಜ್ರಿವಾಲ್ ಪ್ರತಿಕ್ರಿಯೆಗೆ ಅನಿರೀಕ್ಷಿತ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೆಡಿಯು ನಾಯಕ ನೇರವಾಗಿ ಅಂಬಾನಿ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಕೈಗಾರಿಕೋದ್ಯಮಿ ಜತೆಗೆ ಬಿಜೆಪಿಯ ಸಂಬಂಧದ ಕುರಿತು ಕೇಜ್ರಿವಾಲ್ ಆರೋಪಕ್ಕೆ ಬಿಜೆಪಿ ಏಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಮ್ಮ ರಾಜಕೀಯ ಎದುರಾಳಿಯಾದ ನರೇಂದ್ರ ಮೋದಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಸ್ಪಷ್ಟವಾದ ಕೂಡಲೇ ಕುಮಾರ್ ಕಳೆದ ವರ್ಷದ ಜೂನ್ ನಲ್ಲಿ ಬಿಜೆಪಿ ಜತೆಗಿನ ತನ್ನ ಪಕ್ಷದ 17 ವರ್ಷದ ಮೈತ್ರಿಯನ್ನು ಅಂತ್ಯಗೊಳಿಸಿದ್ದರು.
PTI

ನಿನ್ನೆಯ ಭಾಷಣದಲ್ಲಿ ಸಾಮಾನ್ಯ ಚುನಾವಣೆಗಳ ನಂತರ ಬಿಜೆಪಿ ಜೊತೆಗಿನ ಮರುಮೈತ್ರಿಯ ಯಾವುದೇ ಸಾಧ್ಯತೆ ಇಲ್ಲ ಎಂಬುದನ್ನು ಒತ್ತಿ ಹೇಳಿದ ಅವರು ಅದರ ಬದಲಿಗೆ ಅಧಿಕಾರ ತ್ಯಜಿಸುತ್ತೇನೆ ಮತ್ತು ರಾಜಕೀಯದಿಂದ ದೂರವಾಗುತ್ತೇನೆ ಎಂದು ಹೇಳಿದರು.

ರಾಷ್ಟ್ರೀಯ ಚುನಾವಣೆಗಳಲ್ಲಿ ಬಿಹಾರದ ಎಲ್ಲ ಪಕ್ಷಗಳ ವಿರುದ್ಧ ಹೋರಾಡುವ ತಮ್ಮ ಉದ್ದೇಶವನ್ನು ಕೇಜ್ರಿವಾಲ್ ಇತ್ತೀಚಿಗೆ ಬಹಿರಂಗ ಪಡಿಸಿದ್ದರು. ಅಲ್ಲದೇ ನಿತೀಶ್ ಕುಮಾರ್ ಸಂಪುಟದ ಪ್ರಮುಖ ಅಲ್ಪಸಂಖ್ಯಾತ ಮುಖ ಸಚಿವ ಪರ್ವೀನ್ ಅಮಾನುಲ್ಲಾ ಆಪ್ ಸೇರಿದಾಗ ಮುಜುಗರಕ್ಕೊಳಗಾಗಿದ್ದ ಜೆಡಿಯು ನಾಯಕ ಕೇಜ್ರಿವಾಲ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವುದು ಗಮನಾರ್ಹವೆನಿಸಿದೆ.

ವೆಬ್ದುನಿಯಾವನ್ನು ಓದಿ