ಬಿಹಾರ್ ಸಿಎಂಗೆ ಗ್ರಹಣ ಹಿಡಿದಿದ್ದರಿಂದ ಅಭಿವೃದ್ಧಿಯಾಗಿಲ್ಲ: ಮೋದಿ

ಗುರುವಾರ, 27 ಮಾರ್ಚ್ 2014 (20:31 IST)
PTI
ಬಿಹಾರ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿಯಾಗಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಹಾರದ ಸಾಸಾರಾಮ್‌ನಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಬಿಹಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಆರೋಪಿಸಿದ್ದು, ಸದ್ಯ ಬಿಹಾರಕ್ಕೆ ಗ್ರಹಣ ಹಿಡಿದಿದ್ದು, ಗ್ರಹಣ ಕಳೆದ ನಂತರ ಬಿಹಾರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಪರೋಕ್ಷವಾಗಿ ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಭಿವೃದ್ಧಿಯಿಂದ ಮಾತ್ರ ದೇಶದ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಗುಜರಾತ್ ಅಭಿವೃದ್ಧಿಯಿಂದ ಮುಂದಿದೆ. ಅಲ್ಲಿನ ಜನತೆಗೆ 24 ಗಂಟೆಗಳ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಇದೆಲ್ಲ ಸಾಧ್ಯವಾಗಿದ್ದು, ಕೇವಲ ಅಭಿವೃದ್ಧಿಯಿಂದ ಮಾತ್ರ. ಹೀಗಾಗಿ ದೇಶದ ಎಲ್ಲ ಸಮಸ್ಯೆಗಳಿಗೂ ಅಭಿವೃದ್ಧಿಯಿಂದ ಮಾತ್ರ ಪರಿಹಾರ ಸಿಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಚುನಾವಣಾ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಡವರ ನೆನಪಾಗುತ್ತದೆ. ಅಧಿಕಾರ ಸಿಕ್ಕ ನಂತರ ಬಡವರ ನೆನಪಾಗುವುದಿಲ್ಲ. ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣು ಎರಚುತ್ತಿದೆ ಎಂದು ದೂರಿದರು. ಸಾಸಾರಾಮ್ ಕ್ಷೇತ್ರದಿಂದ ಗೆದ್ದಿದ್ದ ಸ್ವೀಕರ್ ಮೀರಾಕುಮಾರ್ ಅವರು ಇಲ್ಲಿನ ಜನರಿಗಾಗಿ ಏನು ಮಾಡಿಲ್ಲ. ಅವರ ಸಾಧನೆ ಶೂನ್ಯ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ