ಬುಡಕಟ್ಟು ಮಹಿಳೆಗೆ ಹೊಡೆದರೇ ಚಂದ್ರಬಾಬು ನಾಯ್ಡು?

ಶನಿವಾರ, 9 ಅಕ್ಟೋಬರ್ 2010 (13:38 IST)
ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ಸಭೆಯೊಂದರಲ್ಲಿ ಬುಡಕಟ್ಟು ಮಹಿಳೆಯೊಬ್ಬರ ಮೇಲೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಲ್ಲೆ ನಡೆಸಿದ್ದಾರೆಯೇ? ಹೀಗೆಂದು ಹೇಳುತ್ತಿರುವುದು ಕಾಂಗ್ರೆಸ್‌ಗೆ ಸೇರಿದ ಟಿವಿ ಚಾನೆಲ್. ಆದರೆ ನಾಯ್ಡು ಅವರ ತೆಲುಗು ದೇಶಂ ಪಕ್ಷವು (ಟಿಡಿಪಿ) ಆರೋಪವನ್ನು ತಳ್ಳಿ ಹಾಕಿದೆ.

ಸುದ್ದಿ ವಾಹಿನಿಯು ಪದೇ ಪದೇ ಪ್ರಸಾರ ಮಾಡುತ್ತಿರುವ ವೀಡಿಯೋದಲ್ಲಿ ಟಿಡಿಪಿ ವರಿಷ್ಠ ನಾಯ್ಡು ಮಹಿಳೆಯೊಬ್ಬರಿಗೆ ಹೊಡೆಯಲೆಂದು ಕೈ ಎತ್ತುತ್ತಿರುವುದು, ಆಕೆಯ ಕೈಯಿಂದ ಮೈಕ್ ಸೆಳೆದುಕೊಳ್ಳುತ್ತಿರುವುದು ಮತ್ತು ಬಲವಂತದಿಂದ ಸುಮ್ಮನೆ ಕೂರುವಂತೆ ಆಕೆಯ ಭುಜದ ಮೇಲೆ ಹೊಡೆಯುತ್ತಿರುವುದು ಕಾಣುತ್ತಿದೆ. ಆದರೆ ಇದು ಆಕೆಯನ್ನು ತಡೆಯಲು ಯತ್ನಿಸಿದ ಮಾತ್ರ ಎಂದು ನಾಯ್ಡು ಸ್ಪಷ್ಟನೆ ನೀಡಿದ್ದಾರೆ.

ವಂತಡಾ ಗ್ರಾಮದಲ್ಲಿನ ಕೆಂಪು ಮಣ್ಣು ಗಣಿಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿದ ನಂತರ ಪೂರ್ವ ಗೋದಾವರಿ ಜಿಲ್ಲೆಯ ಪ್ರತಿಪಾಡು ಎಂಬಲ್ಲಿ ಶುಕ್ರವಾರ ನಾಯ್ಡು ಸಭೆ ನಡೆಸಿದ ಹೊತ್ತಿನಲ್ಲಿ ಈ ಘಟನೆ ನಡೆದಿದೆ.

ಜನರೊಂದಿಗೆ ಸಂವಾದ ನಡೆಸುತ್ತಿದ್ದ ಹೊತ್ತಿನಲ್ಲಿ, ಗಣಿಗಾರಿಕೆಯನ್ನು ಬೆಂಬಲಿಸಿದ ಮಹಿಳೆಯೊಬ್ಬರು ರಾಜಕಾರಣಿಗಳು ಪದೇ ಪದೇ ಇಲ್ಲಿಗೆ ಭೇಟಿ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವರು ಮತ್ತೊಬ್ಬ ಮಹಿಳೆಯಿಂದ ಮೈಕ್ ಎಳೆದುಕೊಂಡಿದ್ದರು. ಇದರಿಂದ ಕ್ಷುದ್ರರಾದ ನಾಯ್ಡು, ಆಕೆಗೆ ಎಚ್ಚರಿಕೆ ನೀಡಿದ್ದಲ್ಲದೆ ಹೊಡೆಯಲು ಕೈ ಮೇಲೆತ್ತಿದ್ದರು.

ನಂತರ ಆಕೆಯ ಕೈಯಿಂದ ಮೈಕ್ ಸೆಳೆದುಕೊಂಡು, ಸುಮ್ಮನೆ ಕೂರುವಂತೆ ಆಕೆಯ ಭುಜದ ಮೇಲೆ ಹೊಡೆದರು. ಹೀಗೆಂದು ತನ್ನ ವರದಿಯಲ್ಲಿ ವೀಡಿಯೋ ಸಹಿತ ಹೇಳುತ್ತಿರುವುದು ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರ ಪುತ್ರ, ಕಾಂಗ್ರೆಸ್ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರ ಮಾಲಕತ್ವದ 'ಸಾಕ್ಷಿ' ತೆಲುಗು ಸುದ್ದಿ ವಾಹಿನಿ.

ಘಟನೆ ಬಹಿರಂಗವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ನಾಯ್ಡು ಅವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.

ಆರೋಪಗಳೆಲ್ಲವನ್ನೂ ತೆಲುಗು ದೇಶಂ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದ ಮಹಿಳೆಯರ ಎರಡು ಗುಂಪುಗಳನ್ನು ಸಮಾಧಾನ ಪಡಿಸಲು ನಾಯ್ಡು ಮುಂದಾಗಿದ್ದರು. ಅಕ್ರಮ ಗಣಿಗಾರಿಕೆಯನ್ನು ಬಹಿರಂಗ ಪಡಿಸುತ್ತಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನಾಯ್ಡು ವಿರುದ್ಧ ಟಿವಿ ಚಾನೆಲ್ ಅಪಪ್ರಚಾರ ಮಾಡುತ್ತಿದೆ ಎಂದು ಟಿಡಿಪಿ ನಾಯಕ ರಮೇಶ್ ರಾಥೋಡ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ