ಬುಧವಾರದಂದು ದೇವಮಾನವ ಸತ್ಯ ಸಾಯಿಬಾಬಾ ಅಂತ್ಯಕ್ರಿಯೆ

ಸೋಮವಾರ, 25 ಏಪ್ರಿಲ್ 2011 (10:07 IST)
EVENT
ದೇವಮಾನವ ಶ್ರೀ ಸತ್ಯ ಸಾಯಿಬಾಬಾ ರವಿವಾರದಂದು ಬೆಳಿಗ್ಗೆ 7.40 ಗಂಟೆಗೆ ನಿಧನ ಹೊಂದಿದ್ದು, ಬುಧುವಾರದಂದು ಸಾಯಿ ಕುಲವಂತ್ ಹಾಲ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉಸಿರಾಟದ ತೊಂದರೆಯಿಂದಾಗಿ ಕಳೆದ ಮಾರ್ಚ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಬಾ,ನಾಲ್ಕು ದಿನಗಳಿಂದ ಪ್ರಜ್ಞಾಶೂನ್ಯರಾಗಿದ್ದರು. ಅಂಗಾಂಗಗಳ ವೈಫಲ್ಯಕ್ಕೆ ಒಳಗಾಗಿದ್ದ ಅವರನ್ನು ಉಳಿಸಿಕೊಳ್ಳಲು ದೇಶ ವಿದೇಶಗಳ ವೈದ್ಯರು ಹರಸಾಹಸ ನಡೆಸಿದರು. ಆದರೆ, ಕೊನೆಗೂ ಅಸಹಾಯಕರಾಗಬೇಕಾಯಿತು.

ನಾಲ್ಕು ದಶಕಗಳ ಕಾಲ ಬಾಬಾ ದರ್ಶನ ಮತ್ತು ಪ್ರವಚನ ನೀಡಿದ ಪ್ರಶಾಂತಿ ನಿಲಯದ ಸಾಯಿ ಕುಲವಂತ್ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ. ಭಾನುವಾರ ಸಂಜೆಯಿಂದ ಎರಡು ದಿನಗಳ ಕಾಲ ಬಾಬಾ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಆಂಧ್ರದ ಕೈಗಾರಿಕೆ ಖಾತೆ ಸಚಿವೆ ಗೀತಾ ರೆಡ್ಡಿ ತಿಳಿಸಿದ್ದಾರೆ.

ಶಾಂತಿ, ಪ್ರೀತಿ ಮತ್ತು ಅಧ್ಯಾತ್ಮವನ್ನು ಜಗತ್ತಿನಲ್ಲಿ ಪಸರಿಸುವಂತೆ ಮಾಡಿದ ಬಾಬಾ 166 ದೇಶಗಳಲ್ಲಿ ಆಶ್ರಮಗಳನ್ನು ಹೊಂದಿದ್ದು, ಲಕ್ಷಾಂತರ ಭಕ್ತರು ಅನುಯಾಯಿಗಳಾಗಿದ್ದಾರೆ.

ದೇಶದ ಹಲವೆಡೆ ಆಸ್ಪತ್ರೆಗಳನ್ನು ಸ್ಥಾಪಿಸಿ ಬಡ ರೋಗಿಗಳಿಗೆ ಉಚಿತ ಸೇವೆಯನ್ನು ನೀಡಿ ಜೀವದಾನ ಮಾಡಿದ್ದರು. 5 ಲಕ್ಷ ಮಂದಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಿದ್ದಲ್ಲದೇ 3 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿ, ಸರಕಾರ ಕೂಡಾ ನಾಚಿ ನೀರಾಗುವಂತೆ ಮಾಡಿದ ಬಾಬಾ, ಇಂದು ನಮ್ಮೊಂದಿಗಿಲ್ಲ ಎನ್ನುವ ಕೊರಗು ಎಲ್ಲರನ್ನು ಕಾಡುತ್ತಿದೆ.

ವೆಬ್ದುನಿಯಾವನ್ನು ಓದಿ