ಬೆಲೆ ಇಳಿಕೆ ಹೇಳಿಕೆ: ದೇವ್ರಾಗೆ ನೋಟಿಸ್ ಜಾರಿ

ಬುಧವಾರ, 26 ನವೆಂಬರ್ 2008 (19:37 IST)
ವಿಧಾನಸಭಾ ಚುನಾವಣೆಯ ಬಳಿಕ ತೈಲೋತ್ಪನ್ನಗಳ ಬೆಲೆಯನ್ನು ಕಡಿತಗೊಳಿಸಲಾಗುವುದು ಎಂಬ ಹೇಳಿಕೆ ನೀಡಿದ್ದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾಗೆ ಚುನಾವಣಾ ಆಯೋಗ ಬುಧವಾರ ನೋಟಿಸ್ ಜಾರಿ ಮಾಡಿದೆ.

ಆರು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಪೆಟ್ರೋಲಿಯಂ ದರಗಳನ್ನು ಕಡಿತಗೊಳಿಸುವುದಿಲ್ಲ, ಆದರೆ ಚುನಾವಣೆ ಮುಕ್ತಾಯದ ಬಳಿಕ ತೈಲೋತ್ಪನ್ನಗಳ ಬೆಲೆಯನ್ನು ಇಳಿಸಲಾಗುವುದು ಎಂದು ದೇವ್ರಾ ಅವರು ಮಂಗಳವಾರ ಭರವಸೆ ನೀಡಿದ್ದರು.

ದೇವ್ರಾ ಅವರ ಹೇಳಿಕೆ ವಿರುದ್ಧ ಭಾರತೀಯ ಜನತಾ ಪಕ್ಷದ ನಿಯೋಗ ಬುಧವಾರ ಬೆಳಿಗ್ಗೆ ಚುನಾವಣಾ ಆಯೋಗವನ್ನು ಭೇಟಿಯಾಗಿ, ಕಾಂಗ್ರೆಸ್ ಮೇಲೆ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿತ್ತು.

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ದೇವ್ರಾ ತೈಲೋತ್ಪನ್ನ ದರ ಇಳಿಕೆ ಘೋಷಣೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಪೆಟ್ರೋಲ್ ಬೆಲೆಯಲ್ಲಿ 5ರೂ. ಹಾಗೂ ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ 20ರೂ.ಗಳಷ್ಟು ಕಡಿತಗೊಳಿಸುವಂತೆ ಸಲಹೆ ನೀಡಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಕಳುಹಿಸಲಾಗಿದ್ದು, ಏತನ್ಮಧ್ಯೆ ಡಿಸೇಲ್ ಬೆಲೆಯನ್ನು ಇಳಿಸುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ದೇವ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಜಾಗತಿಕವಾಗಿ ತೈಲ ಬೆಲೆ ಬ್ಯಾರೆಲ್‌ವೊಂದಕ್ಕೆ 147ಡಾಲರ್‌ನಿಂದ 50ಡಾಲರ್‌ಗೆ ಇಳಿದಿರುವ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಸುವುದಾಗಿ ಅವರು ಹೇಳಿದ್ದರು.

ಆದರೆ ಇದೀಗ ಆರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ದೇವ್ರಾ ಅವರ ಹೇಳಿಕೆ ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದ್ದು, ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ