ಭೀಮಸೇನ್ ಜೋಷಿಯವರಿಗೆ ಭಾರತ ರತ್ನ

ಬುಧವಾರ, 5 ನವೆಂಬರ್ 2008 (09:26 IST)
PTI
ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಭೀಮಸೇನ್ ಜೋಷಿ ಅವರಿಗೆ ರಾಷ್ಟ್ರದ ಸರ್ವೋಚ್ಚ ಪ್ರಶಸ್ತಿಯಾದ ಭಾರತದ ರತ್ನ ಪ್ರಶಸ್ತಿಯನ್ನು ಮಂಗಳವಾರ ಕೇಂದ್ರ ಸರ್ಕಾರ ಪ್ರಕಟಿಸಿದೆ.

ತಮ್ಮ ಕಂಠಸಿರಿಯ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಶ್ರೀಮಂತವಾಗಿಸಿರುವ ಜೋಷಿಯವರ ಸಂಪೂರ್ಣ ಹೆಸರು ಭೀಮಸೇನ ಗುರುರಾಜ ಜೋಷಿ. ಇವರು ಕರ್ನಾಟಕದ ಗದಗ್‌ನವರು.

ಪ್ರಸ್ತುತ ಪುಣೆಯಲ್ಲಿರುವ ಜೋಷಿಯವರಿಗೆ ಈ ಹಿಂದೆಯೂ ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

1922ರಲ್ಲಿ ಗದಗ್‌ನಲ್ಲಿ ಜನಿಸಿದ ಜೋಷಿಯವರು, ಧಾರವಾಡದ ಕುಂದಗೋಳದ ಪ್ರಸಿದ್ಧ ಸವಾಯಿ ಗಂಧರ್ವರ ಶಿಷ್ಯರಾಗಿದ್ದಾರೆ.

ಜೋಷಿ ಅವರು ಭಜನೆಗಳು, ಖಯಾಲ್‌ಗಳು ಮತ್ತು ಕಿರಾಣಾ ಘರಾನಾ ಪ್ರಕಾರಗಳಲ್ಲಿ ಸುಪ್ರಪಸಿದ್ಧರಾಗಿದ್ದಾರೆ. ಇವರು ಹಾಡಿದ ಕನ್ನಡ ಭಾಷೆಯ ದಾಸರ ಪದ 'ಭಾಗ್ಯದ ಲಕ್ಷ್ಮಿ ಭಾರಮ್ಮ' ಅತ್ಯಂತ ಜನಪ್ರಿಯ. ತನ್ನ ಸಂಗೀತ ವಾಂಛೆಯಿಂದಾಗಿ ಜೋಷಿ, ತನ್ನ 11ನೆ ವಯಸ್ಸಿನಲ್ಲೇ ಮನೆ ತೊರೆದಿದ್ದರು. ಅವರು ತನ್ನ 20ನೆ ವಯಸ್ಸಿನಲ್ಲೇ ಕನ್ನಡ, ಹಿಂದಿ ಭಜನೆಯ ಚೊಚ್ಚಲ ಆಲ್ಬಂ ಹೊರತಂದಿದ್ದಾರೆ.

ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಇದುವರೆಗೆ ಒಟ್ಟು ಐದು ಮಂದಿಗೆ ಭಾರತರತ್ನ ಪುರಸ್ಕಾರ ಲಭಿಸಿದೆ. ಸತ್ಯಜಿತ್ ರೇ, ಎಂ.ಎಸ್.ಸುಬ್ಬುಲಕ್ಷ್ಮಿ, ಪಂಡಿತ್ ರವಿಶಂಕರ್, ಲತಾ ಮಂಗೇಶ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರುಗಳು ಈ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ