ಭ್ರಷ್ಟಾಚಾರ ವಿರೋಧಿ ಯಾತ್ರೆ: ಇದೀಗ ಗುರು ಶ್ರೀ ರವಿಶಂಕರ್ ಸರದಿ

ಸೋಮವಾರ, 31 ಅಕ್ಟೋಬರ್ 2011 (15:36 IST)
PTI
ಉತ್ತರಪ್ರದೇಶದಲ್ಲಿ ಯೋಗಾ ಗುರು ಬಾಬಾ ರಾಮದೇವ್ ಭ್ರಷ್ಟಾಚಾರ ವಿರೋಧಿ ಯಾತ್ರೆ ಕೈಗೊಂಡ ನಂತರ, ಇದೀಗ ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಕೂಡಾ ಮುಂದಿನ ತಿಂಗಳಿನಿಂದ ಭ್ರಷ್ಟಾಚಾರ ವಿರೋಧಿ ಯಾತ್ರೆಯನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಶ್ರೀ ರವಿಶಂಕರ್ ಉತ್ತರಪ್ರದೇಶದ ಕಾಂಗ್ರೆಸ್‌ನ ಭದ್ರಕೋಟೆ ಜಿಲ್ಲೆಗಳಾದ ಜೌವುನ್‌ಪುರ್, ಸುಲ್ತಾನ್‌ಪುರ್, ಮಿರ್ಜಾಪುರ್, ಅಮೇಥಿ, ಸೋನೆಭದ್ರಾ.ಚಂಡೌಲಿ ಮತ್ತು ಕಾನ್ಪುರ್ ಜಿಲ್ಲೆಗಳಲ್ಲಿ ನವೆಂಬರ್ 7 ರಿಂದ ನವೆಂಬರ್ 10ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ರವಿಶಂಕರ್ ಭ್ರಷ್ಟಾಚಾರ ವಿರೋಧಿ ಯಾತ್ರೆ ಮಹತ್ವ ಪಡೆದಿದೆ. 2014ರಲ್ಲಿ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶ ಚುನಾವಣೆ ಮುನ್ನುಡಿಯಾಗಲಿದೆ ಎನ್ನುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಹರಸಾಹಸ ನಡೆಸಿವೆ.

ಉತ್ತರಪ್ರದೇಶದ ಪ್ರಾದೇಶಿಕ ಪಕ್ಷಗಳಾದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯನ್ನೊಡ್ಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕೂಡಾ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದು, ನವೆಂಬರ್ 14 ರಿಂದ ರಾಜ್ಯಾಧ್ಯಂತ ಪ್ರವಾಸ ಮಾಡಲಿದ್ದಾರೆ.

ಆಸಕ್ತಿಕರ ಸಂಗತಿಯೆಂದರೆ, ಯುಪಿಎ ಸರಕಾರದ ಇಮೇಜ್ ಹಾಳುಗೆಡುವ ಉದ್ದೇಶದಿಂದ ಶ್ರೀ ಶ್ರೀ ರವಿಶಂಕರ್ ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಳೆದ ವಾರ ಆರೋಪಿಸಿದ್ದರು

ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ ಶ್ರೀ ರವಿಶಂಕರ್, ಭ್ರಷ್ಟಾಚಾರದ ವಿರುದ್ಧದ ತಮ್ಮ ಹೋರಾಟ ಮುಂದುವರಿಯಲಿದೆ. ಕಳೆದ ವಾರ ಒಂದು ಲಕ್ಷ ಜನತೆಗೆ ಲಂಚ ನೀಡದಂತೆ ಪ್ರಮಾಣ ಮಾಡಿಸಿರುವುದಾಗಿ ತಿಳಿಸಿದ್ದಾರೆ.

ರವಿಶಂಕರ್ ವಿರುದ್ಧ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಹೇಳಿಕೆಗೆ ಕಿಡಿಕಾರಿದ ಬಿಜೆಪಿ, ದಿಗ್ವಿಜಯ್ ಬಾಯಿಚಪಲ ರೋಗದಿಂದ ಬಳಲುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ವೆಬ್ದುನಿಯಾವನ್ನು ಓದಿ