ಮದುವೆಯಾಗುವ ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ರೆ ಅದು ರೇಪ್ ಅಲ್ಲ '

ಶನಿವಾರ, 5 ಏಪ್ರಿಲ್ 2014 (13:35 IST)
ಇಬ್ಬರು ವಯಸ್ಕರ ನಡುವೆ ವಿವಾಹವಾಗುವ ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ರೇಪ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಕೋರ್ಟೊಂದು ಅಪರೂಪದ ತೀರ್ಪಿತ್ತಿದೆ. ವಿವಾಹ ಪೂರ್ವ ಸೆಕ್ಸ್ ಅನೈತಿಕವಾಗಿದ್ದು, ಪ್ರತಿಯೊಂದು ಧರ್ಮದ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ತಿಳಿಸಿತು. ಮಹಿಳೆ ವಿಶೇಷವಾಗಿ ವಿದ್ಯಾವಂತ, ಆಫೀಸಿಗೆ ಹೋಗುವ ಮಹಿಳೆಯರು ಅವಳ ಪ್ರಿಯಕರನಿಂದ ಮದುವೆಯಾಗುವ ಆಶ್ವಾಸನೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅವಳನ್ನು ಸ್ವತಃ ಗಂಡಾಂತರಕ್ಕೆ ಒಡ್ಡಿಕೊಂಡ ಹಾಗಾಗುತ್ತದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ಎಚ್ಚರಿಸಿದರು.

ನನ್ನ ಅಭಿಪ್ರಾಯದಲ್ಲಿ, ಇಬ್ಬರು ವಯಸ್ಕರ ನಡುವೆ ಮದುವೆಯಾಗುವ ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ನಂತರ ಪ್ರಿಯಕರ ಆ ಭರವಸೆಯನ್ನು ಈಡೇರಿಸದಿದ್ದರೆ ಅದು ರೇಪ್ ಎನಿಸುವುದಿಲ್ಲ ಎಂದು ನ್ಯಾಯಾಧೀಶರು ತೀರ್ಪಿತ್ತರು. ಯುವತಿ ತಾನು ಅನೈತಿಕವಾದ ಮತ್ತು ಧರ್ಮ ಸಿದ್ಧಾಂತದ ವಿರುದ್ಧವಾದ ಕ್ರಿಯೆ ನಡೆಸುತ್ತಿದ್ದೇನೆಂದು ಅರಿತಿರಬೇಕು.

ಜಗತ್ತಿನ ಯಾವುದೇ ಧರ್ಮವು ವಿವಾಹ ಪೂರ್ವ ಲೈಂಗಿಕತೆಗೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು. ಬಹುರಾಷ್ಟ್ರೀಯ ಕಂಪೆನಿಯ ನೌಕರನನ್ನು ರೇಪ್ ಆರೋಪಗಳಿಗೆ ಸಂಬಂಧಿಸಿದಂತೆ ದೋಷಮುಕ್ತಿಗೊಳಿಸಿ ಕೋರ್ಟ್ ಮೇಲಿನ ತೀರ್ಪು ನೀಡಿದೆ. ಖಾಸಗಿ ಕಂಪನಿಯಲ್ಲಿ ಕಾರ್ಯದರ್ಶಿ ಮತ್ತು ಆಡಳಿತಾತ್ಮಕ ಕೆಲಸ ನಿರ್ವಹಿಸುತ್ತಿದ್ದ ಯುವತಿ ತನ್ನನ್ನು ಪ್ರೀತಿಸಿದ್ದ ಪ್ರಿಯಕರನ ವಿರುದ್ಧ 2011ರ ಮೇನಲ್ಲಿ ರೇಪ್ ಕೇಸು ದಾಖಲಿಸಿದ್ದಳು. ಮದುವೆಯಾಗುವ ಭರವಸೆ ನೀಡಿ ತನ್ನ ಜತೆ ಯುವಕ ಲೈಂಗಿಕ ಸಂಬಂಧ ಹೊಂದಿದ ನಂತರ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು.

'ನಾನು ನಿನ್ನನ್ನು ವಿವಾಹವಾಗುವುದರಿಂದ ಲೈಂಗಿಕ ಕ್ರಿಯೆ ನಡೆಸುವುದು ತಪ್ಪಾಗುವುದಿಲ್ಲ ಎಂದು ಹೇಳುವ ಯುವಕನ ಜತೆ ಅನೈತಿಕ ಸಂಬಂಧ ಹೊಂದುವುದು ಸರಿಯಲ್ಲವೆನ್ನುವುದು ತಮ್ಮ ನಂಬಿಕೆ. ಈ ಕ್ರಿಯೆಯ ಸಾಧಕ ಬಾಧಕಗಳನ್ನು ಇಂತಹ ಸಂದರ್ಭಗಳಲ್ಲಿ ಯುವತಿ ತಿಳಿದುಕೊಂಡು ತನ್ನ ದೇಹವನ್ನು ಅವನಿಗೆ ಒಪ್ಪಿಸಬೇಕೋ ಬೇಡವೋ ಎಂದು ತೀರ್ಮಾನಿಸಬೇಕು' ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ