ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ, ಎಟಿಎಂಗೆ ಹೋದ್ರೆ ಸಾಕು

ಬುಧವಾರ, 29 ಜನವರಿ 2014 (14:01 IST)
PTI
ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಬೇಕಾಗಿಲ್ಲ. ಒರಿಸ್ಸಾ ಪೊಲೀಸರು ಎಟಿಎಂನಂತಹ ಮಷಿನ್‌ಗಳನ್ನು ಪರಿಚಯಿಸಿದ್ದು, ಮಹಿಳೆಯರು ಮಷಿನ್‌ನಲ್ಲಿ ತಮ್ಮ ದೂರನ್ನು ದಾಖಲಿಸಬಹುದಾಗಿದೆ.

ಎಟಿಎಂ ಮಷಿನ್‌ನಂತಿರುವ ದಿ ಇನ್‌ಸ್ಟಂಟ್ ಕಂಪ್ಲೋಟ್ ಲಾಗಿಂಗ್ ಇಂಟರ್‌ನೆಟ್ ಕಿಯೋಸ್ಕ್ ( ಐಸಿಎಲ್‌ಐಸಿಕೆ) ಮಷಿನ್‌ಗಳನ್ನು ಎಟಿಎಂಗಳಲ್ಲಿ ಅಳವಡಿಸಲಾಗಿದ್ದು ಅಲ್ಲಿಯೇ ದೂರು ದಾಖಲಿಸಬಹುದಾಗಿದೆ.

ಇಂತಹ ಮಷಿನ್‌ಗಳನ್ನು ದೇಶದಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐಸಿಎಲ್‌ಐಸಿಕೆ ಮಷಿನ್‌ಗಳಲ್ಲಿ ಧ್ವನಿ ರಿಕಾರ್ಡ್‌ ಮತ್ತು ಲಿಖಿತ ದಾಖಲೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಈ ಮಷಿನ್‌ ಇಂಟರ್ನೆಟ್‌ ಮೂಲಕ ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಜೊಯಾದೀಪ್ ನಾಯಕ್ ತಿಳಿಸಿದ್ದಾರೆ.

ಪ್ರತಿಯೊಬ್ಬ ಮಹಿಳೆ ಮೂರು ರೀತಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ. ಒಂದು ವೇಳೆ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಇ-ಮೇಲ್ ಮೂಲಕ ಕಳುಹಿಸಬೇಕಾದಲ್ಲಿ ಟಚ್ ಸ್ಕ್ರೀನ್ ಮೂಲಕ ಟೈಪ್ ಮಾಡಿ ದೂರಿನ ವಿವರಗಳನ್ನು ದಾಖಲಿಸಬಹುದು.

ಮತ್ತೊಂದು ವಿಧಾನವೆಂದರೆ, ಒಂದು ವೇಳೆ ದೂರು ನೀಡಲಿರುವ ಮಹಿಳೆಗೆ ಟೈಪ್ ಮಾಡುವುದು ಬೇಡ ಎಂದನಿಸಿದಲ್ಲಿ ಸ್ಪೀಕರ್‌ನಲ್ಲಿ ಮಾತನಾಡುವ ಮೂಲಕ ದೂರು ದಾಖಲಿಸಬಹುದು. ಮಹಿಳೆಯ ಧ್ವನಿ ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ನೀಡುತ್ತದೆ.

ಮೂರನೇ ವಿಧಾನವೆಂದರೆ, ಒಂದು ವೇಲೆ ದೌರ್ಜನ್ಯಕ್ಕೊಳಗಾದ ಮಹಿಳೆ ಪೇಪರ್‌ನಲ್ಲಿ ದೂರು ಬರೆದಿದ್ದಲ್ಲಿ ಅದನ್ನು ಮಷಿನ್‌ ಒಳಗಡೆ ಇಟ್ಟಲ್ಲಿ ಪೇಪರ್ ಸ್ಕ್ಯಾನ್‌ ಆಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪುತ್ತದೆ.

ಇದೊಂದು ಪೈಲಟ್ ಪ್ರೊಜೆಕ್ಟ್ ಮಾದರಿಯದ್ದಾಗಿದ್ದು. ಮಹಿಳೆಯರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕೆಲವರಿಗೆ ಪೊಲೀಸ್ ಠಾಣೆಗೆ ಹೋಗಲು ಬಯಸುವುದಿಲ್ಲ. ಅಂತಹ ಮಹಿಳೆಯರು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಮಷಿನ್‌ನ ಪ್ರಯೋಜನ ಪಡೆಯಬಹುದು ಎಂದು ಪೊಲೀಸ್ ಮಹಾನಿರ್ದೇಶಕ ಜೊಯಾದೀಪ್ ನಾಯಕ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ