ಮಾತೆಯರಿಗೆ, ಸಹೋದರಿಯರಿಗೆ ರಕ್ಷಣೆ ನೀಡುವುದೇ ದೊಡ್ಡ ಸಮಸ್ಯೆಯಾಗಿದೆ: ಮೋದಿ

ಶನಿವಾರ, 31 ಆಗಸ್ಟ್ 2013 (13:27 IST)
PTI
ಭಾರತೀಯ ಸಮಾಜದಲ್ಲಿ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸುವುದೇ ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ಮಹಿಳೆಯರಿಗೆ ತಾವು ಅಸುರಕ್ಷಿತವಾಗಿದ್ದೇನೆ ಎನ್ನುವ ಭಾವನೆ ಬಂದಲ್ಲಿ ಭಾರತೀಯ ಪುರುಷರಿಗೆ ತಮ್ಮನ್ನು ತಾವು ಗಂಡು ಎಂದು ಕರೆದುಕೊಳ್ಳುವ ಯಾವ ಹಕ್ಕು ಇಲ್ಲ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೀತಾ ಮಾತೆ ಮತ್ತು ಸಾವಿತ್ರಿಯಂತಹ ಮಹಾನ್ ತಾಯಂದಿರು ಜನಿಸಿದಂತಹ ದೇಶದಲ್ಲಿ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸುವುದು ಇಂದು ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ಕಿಡಿಕಾರಿದ್ದಾರೆ.

ರಾಜಕೀಯವಾಗಿ ಬಳಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿಲ್ಲ. ಆದರೆ, ಪುರುಷರ ಉಪಸ್ಥಿತಿಯ ಮಧ್ಯೆಯೂ ಸಹೋದರಿಯರಿಗೆ ಯಾಕೆ ಶಾಂತಿಯುತ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಕೂಡಾ ಸಹೋದರಿಯರು ಏಕಾಂಗಿಯಾಗಿ ವಾಸಿಸಲು ಸಾಧ್ಯವಾಗದಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಘಟನೆಗಳಿಂದ ಪುರುಷರು ನಾಚಿಕೆಗೇಡಿತನದಿಂದ ಸಾಯಬೇಕು ಎಂದು ಗುಡುಗಿದರು.

ಮುಂಬೈ ಗ್ಯಾಂಗ್ ರೇಪ್‌ ಮತ್ತು ಸ್ವಘೋಷಿತ ದೇವಮಾನವ ಆಸಾರಾಮ್ ಬಾಪು ಲೈಂಗಿಕ ಘಟನೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮೋದಿ ನಿರಾಕರಿಸಿದರು.

ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇಂತಹ ಘಟನೆಗಳ ವಿರುದ್ಧ ಹೋರಾಟ ಅಗತ್ಯವಾಗಿದೆ. ಪ್ರತಿಯೊಬ್ಬರು ಜವಾಬ್ದಾರಿಯನ್ನು ತೋರಿದಾಗಿ ಮಾತ್ರ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾದ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ