ಮಿತಿ ಮೀರಿದ ಡ್ರಗ್ಸ್; ಬೆಂಗಳೂರು ಯುವತಿ ಗೋವಾದಲ್ಲಿ ಸಾವು

ಗುರುವಾರ, 31 ಡಿಸೆಂಬರ್ 2009 (16:28 IST)
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 23ರ ಹರೆಯದ ಯುವತಿಯೊಬ್ಬಳು ಮಿತಿ ಮೀರಿದ ಮಾದಕ ದ್ರವ್ಯ ಸೇವಿಸಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ ಘಟನೆ ಗೋವಾದಲ್ಲಿ ನಡೆದಿದೆ.

ಮೂಲತಃ ದೆಹಲಿ ನಿವಾಸಿಯಾಗಿರುವ ನೇಹಾ ಬಹುಗುಣ ಎಂಬ ಯುವತಿ ಮಿತಿ ಮೀರಿದ ಡ್ರಗ್ಸ್ ಸೇವಿಸಿದ ಬಳಿಕ ಗಂಭೀರ ಪರಿಸ್ಥಿತಿಯಲ್ಲಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ನೇಹಾ ಗೋವಾದ ಕಾಂಡೋಲಿಮ್ ಬೀಚ್‌ನಲ್ಲಿ ನಡೆದ 'ಸನ್‌‌ಬರ್ನ್ ಗೋವಾ ಫೆಸ್ಟಿವಲ್-2009'ರಲ್ಲಿ ಭಾಗವಹಿಸಿದ್ದಳು. ಆದರೆ ಸ್ಥಳದಲ್ಲಿ ಆಕೆ ಯಾವುದೇ ಮಾದಕ ಪದಾರ್ಥಗಳನ್ನು ಸೇವಿಸಿಲ್ಲ ಎಂದು ಕಾರ್ಯಕ್ರಮದ ಸಂಘಟಕರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ವರದಿಗಳ ಪ್ರಕಾರ ಆಕೆಯ ಸಾವಿಗೆ ಮಿತಿ ಮೀರಿದ ಡ್ರಗ್ಸ್ ಸೇವನೆ ಕಾರಣ. ಆಕೆ ಕಾರ್ಯಕ್ರಮವೊಂದಕ್ಕಾಗಿ ಗೋವಾಕ್ಕೆ ಬಂದಿದ್ದಳು ಎಂದು ಪೊಲೀಸ್ ಇಲಾಖೆಯ ವಕ್ತಾರ ಆತ್ಮರಾಮ್ ದೇಶಪಾಂಡೆ ತಿಳಿಸಿದ್ದಾರೆ.

ಆಕೆ ಗಂಭೀರ ಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಬೀಚಿನಿಂದ ಆಸ್ಪತ್ರೆಗೆ ಧಾವಿಸಿದ್ದಳು. ಆದರೆ ಅದನ್ನು ನಿಯಂತ್ರಿಸಿ ದೇಹವನ್ನು ಸಮಸ್ಥಿತಿಗೆ ತರುವ ಅವಧಿ ಮುಗಿದು ಹೋಗಿತ್ತು ಎಂದು ಮೂಲಗಳು ಹೇಳಿವೆ.

ನಾವು 40 ಸಿಸಿಟೀವಿ ಕ್ಯಾಮರಾಗಳು ಮತ್ತು ನಾಯಿಗಳ ಮೂಲಕ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದು, ಆಕೆ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಮಾದಕ ಪದಾರ್ಥ ಸೇವಿಸಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ