ಮುಂಬೈನಲ್ಲಿ ಆಂಧ್ರ ಯುವತಿಯ ರೇಪ್ ಅಂಡ್ ಮರ್ಡರ್

ಗುರುವಾರ, 23 ಜನವರಿ 2014 (18:52 IST)
PR
PR
ಮುಂಬೈ: ಮುಂಬೈನ ಹೊರವಲಯದಲ್ಲಿ 23 ವರ್ಷ ವಯಸ್ಸಿನ ಯುವತಿಯ ದೇಹ ಹೆದ್ದಾರಿಯ ಬಳಿ ಪತ್ತೆಯಾಗಿತ್ತು. ಆದರೆ ಈ ಯುವತಿಯ ಹತ್ಯೆಯ ನಿಗೂಢತೆಯನ್ನು ಪೊಲೀಸರಿಗೆ ಇನ್ನೂ ಭೇದಿಸಲು ಸಾಧ್ಯವಾಗಿಲ್ಲ. ಇದರಿಂದ ಮಹಿಳಾ ಹಕ್ಕು ರಕ್ಷಣೆ ಕಾರ್ಯಕರ್ತರು ಮತ್ತು ಯುವತಿಯ ಕುಟುಂಬ ತೀವ್ರ ಆಕ್ರೋಶಗೊಂಡಿದೆ. ಅವಳ ದೇಹವು ಕೊಳೆತುಹೋದ ಸ್ಥಿತಿಯಲ್ಲಿದ್ದು, ಆಂಶಿಕವಾಗಿ ಸುಡಲಾಗಿತ್ತು. ಇದರಿಂದ ಪೊಲೀಸರಿಗೆ ಗುರುತಿಸುವುದು ಕಠಿಣವಾಗಿತ್ತು. ಆದರೆ ಅವಳ ಕೈಬೆರಳಲ್ಲಿದ್ದ ಉಂಗುರದಿಂದ ವಿಜಯವಾಡ ಕುಟುಂಬಕ್ಕೆ ಸೇರಿದ ಯುವತಿ ಎನ್ನುವುದು ಪತ್ತೆಯಾಗಿತ್ತು. ಸಾಫ್ಟ್‌ವೇರ್ ದೈತ್ಯ ಕಂಪನಿ ಟಿಸಿಎಸ್‌ನಲ್ಲಿ ಉದ್ಯೋಗದ ಸಲುವಾಗಿ ಒಂದು ವರ್ಷದ ಹಿಂದೆ ಎಸ್ತರ್ ಮುಂಬೈಗೆ ಬಂದಿದ್ದಳು. ಆಂಧ್ರದಲ್ಲಿರುವ ತನ್ನ ಊರಿಗೆ ರಜೆಮೇಲೆ ತೆರಳಿದ್ದ ಯುವತಿ ವಾಪಸ್ ಮುಂಬೈಗೆ ಹೊರಟಿದ್ದಳು.

ಜನವರಿ 4ರಂದು ಅವಳು ಮುಂಬೈ ರೈಲು ಹತ್ತುವಾಗ ತನ್ನ ತಂದೆಯ ಜತೆ ಕಡೆಯ ಬಾರಿ ಮಾತನಾಡಿದ್ದಳು. ಮುಂಬೈನ ಹಾಸ್ಟೆಲ್ ಮುಟ್ಟಿದ ಕೂಡಲೇ ಕರೆ ಮಾಡುವುದಾಗಿ ತನ್ನ ತಂದೆಗೆ ಭರವಸೆ ನೀಡಿದ್ದಳು. ಆದರೆ ಪುತ್ರಿ ಯಾವುದೇ ಕರೆ ಸ್ವೀಕರಿಸದಿದ್ದರಿಂದ ತಂದೆ ಜೊನಾಥನ್ ಅನುಹ್ಯಾ ತಮ್ಮ ಪುತ್ರಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು.

PR
PR
ಅವಳ ಸೆಲ್‌ಫೋನ್ ಸಿಗ್ನಲ್ ಮೂಲಕ ಅವಳು ಸತ್ತುಬಿದ್ದಿದ್ದ ಸ್ಥಳವನ್ನು ವಿಜಯವಾಡ ಪೊಲೀಸರು ಪತ್ತೆಹಚ್ಚಿದರು. ಅವಳ ಮೈಮೇಲಾದ ಗಾಯಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ದೃಢಪಟ್ಟಿತು. ಎಸ್ತರ್ ಜತೆ ಪ್ರಯಾಣಿಸಿದ ಉಳಿದ ಪ್ರಯಾಣಿಕರು ಕುರ್ಲಾ ನಿಲ್ದಾಣದಲ್ಲಿ ಅವಳು ಇಳಿದಿದ್ದನ್ನು ಕಂಡಿದ್ದಾಗಿ ಹೇಳಿದ್ದರು. ಆದರೆ ನಿಲ್ದಾಣದಲ್ಲಿ ಬಹುಶಃ ಟ್ಯಾಕ್ಸಿ ಅಥವಾ ಆಟೋ ಚಾಲಕರು ಅವಳನ್ನು ಅಪಹರಿಸಿ ದುಷ್ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅವಳು ಒಯ್ದಿದ್ದ ಲ್ಯಾಪ್‌ಟಾಪ್ ಕೂಡ ನಾಪತ್ತೆಯಾಗಿದೆ.

ಅವಳ ಸೆಲ್‌ಫೋನ್ ದೇಹದ ಪಕ್ಕದಲ್ಲಿ ಪತ್ತೆಯಾಗಿತ್ತು. ಸೆಲ್ ‌ಫೋನ್ ಸಂಕೇತಗಳ ಜಾಡು ಹಿಡಿದು ಅವಳ ದೇಹವನ್ನು ಪತ್ತೆಹಚ್ಚಲಾಗಿತ್ತು. ಮಹಿಳಾ ಹಕ್ಕು ರಕ್ಷಣೆ ಕಾರ್ಯಕರ್ತರ ಜತೆ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನಟಿ, ನಿರ್ದೇಶಕಿ ಪೂಜಾಭಟ್, ಇದೊಂದು ರೇಪ್ ಕೇಸ್ ಎಂದು ನಾವು ಭಾವಿಸಿದ್ದು ನಿಜವಾಗಿದೆ. ನಮ್ಮ ಆಡಳಿತ ಯಂತ್ರ ಮಹಿಳೆಯರಿಗೆ ಸೂಕ್ತ ರಕ್ಷಣೆ ಕಲ್ಪಿಸುತ್ತದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ