ಮುಖ್ಯಮಂತ್ರಿ ಹೂಡಾ ಅಕ್ರಮ ವಿವಾಹ: ರಾಜೀನಾಮೆಗೆ ಆಗ್ರಹ

ಮಂಗಳವಾರ, 4 ಮಾರ್ಚ್ 2014 (11:40 IST)
PR
PR
ಚಂದೀಗಢ: ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅಕ್ರಮವಾಗಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು, ಅವರಿಂದ ಪುತ್ರನನ್ನು ಕೂಡ ಪಡೆದಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಲೋಕದಳ ಮುಖಂಡರು ಆರೋಪಿಸಿದ್ದು, ತಕ್ಷಣವೇ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಐಎನ್‌ಎಲ್‌ಡಿ ಪ್ರಧಾನಕಾರ್ಯದರ್ಶಿ ಅಭಯ್ ಸಿಂಗ್ ಚೌಟಾಲಾ, ಹೂಡಾ ಈಗಾಗಲೇ ಮದುವೆಯಾಗಿದ್ದರೂ ಡೆಹ್ರಾಡನ್ ಮೂಲದ ಮಹಿಳೆಯನ್ನು 1992ರಲ್ಲಿ ಮದುವೆಯಾದರು ಎಂದು ಆರೋಪಿಸಿದ್ದಾರೆ. ಇದೊಂದು ಗಂಭೀರ ವಿಷಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ತೆಗೆದು, ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಿಳೆ ಡೆಹ್ರಾಡನ್ ಕೋರ್ಟ್‌ಗೆ ದೂರು ನೀಡಿ ಹೂಡಾ ಜತೆ ತಮ್ಮ ಮದುವೆಯಾಗಿದ್ದು, ಒಂದು ಮಗುವನ್ನು ಕೂಡ ಹೊಂದಿರುವುದಾಗಿ ಹೇಳಿದ್ದರು.

ಕೋರ್ಟ್ ಎದುರು ಮಹಿಳೆ ಪ್ರಮಾಣಪತ್ರ ಕೂಡ ಸಲ್ಲಿಸಿದ್ದಾಳೆ ಎಂದು ಚೌಟಾಲಾ ಹೇಳಿದ್ದಾರೆ. ಹೂಡಾ ತಮ್ಮನ್ನು ಮದುವೆಯಾಗಿ ವಂಚನೆ ಮಾಡಿದ್ದಾರೆ ಎಂದೂ ಮಹಿಳೆ ದೂರಿದ್ದಾರೆಂದು ಚೌಟಾಲಾ ಹೇಳಿದ್ದಾರೆ. ಇಡೀ ಪ್ರಕರಣದ ತನಿಖೆ ನಡೆಸಿ, ನ್ಯಾಯಸಮ್ಮತ ತನಿಖೆ ನಡೆಯಲು ಹೂಡಾರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ