ಮೊದ್ಲು ಬಿಜೆಪಿಯಲ್ಲಿನ ಭ್ರಷ್ಟಾಚಾರ ಅಂತ್ಯಗೊಳಿಸಿ: ಆಡ್ವಾಣಿಗೆ ಕಾಂಗ್ರೆಸ್

ಗುರುವಾರ, 27 ಅಕ್ಟೋಬರ್ 2011 (14:37 IST)
PTI
ಬಿಜೆಪಿ ನಾಯಕರ ಭ್ರಷ್ಟಾಚಾರವನ್ನು ಪ್ರಸ್ತಾಪಿಸದೆ ಭಾರತದ ಭ್ರಷ್ಟಾಚಾರದ ಇತಿಹಾಸ ಅಂತ್ಯವಾಗುವುದಿಲ್ಲ. ಆದ್ದರಿಂದ, ಮೊದ್ಲು ಬಿಜೆಪಿಯಲ್ಲಿನ ಭ್ರಷ್ಟಾಚಾರವನ್ನು ಅಂತ್ಯಗೊಳಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿಯವರ ಯಾತ್ರೆಯ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಶಾಶ್ವತವಾಗಿ ಪ್ರಧಾನಿಯಾಗುವ ನಿರೀಕ್ಷೆಯಲ್ಲಿರುವ ಮತ್ತು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್‌.ಕೆ.ಆಡ್ವಾಣಿ, ಬಿಜೆಪಿಯಲ್ಲಿರುವ ಬಂಗಾರು ಲಕ್ಷ್ಮಣ್, ದಿಲೀಪ್ ಸಿಂಗ್ ಯಾದವ್, ಬಿ.ಎಸ್.ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರಂತಹ ಭ್ರಷ್ಟ ಕುಳಗಳನ್ನು ಪಕ್ಷದಿಂದ ಹೊರಹಾಕುವ ಧೈರ್ಯ ತೋರಲಿ. ನಂತರ ಕಾಂಗ್ರೆಸ್ ಪಕ್ಷವನ್ನು ಟೀಕಿಸಲಿ ಎಂದು ಕಾಂಗ್ರೆಸ್ ವಕ್ತಾರ ರಷೀದ್ ಅಳ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೂ ತರಾಟೆಗೆ ತೆಗೆದುಕೊಂಡು, ಕೇಂದ್ರ ಸರಕಾರವನ್ನು ಉರುಳಿಸುವ ಸಂಚು ನಡೆಸಿ ಓಟಿಗಾಗಿ ನೋಟು ಹಗರಣದಲ್ಲಿ ಭಾಗಿಯಾದ ಬಿಜೆಪಿಯ ಇಬ್ಬರು ಸಂಸದರು ಮತ್ತು ಆಡ್ವಾಣಿ ಪರಮಾಪ್ತ ಸುಧೀಂದ್ರ ಕುಲ್ಕರ್ಣಿಯವರನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ತೆರಳಿ, ತಮ್ಮ ಸಮರ್ಥನೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಓಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತ ಆರೋಪಿಗಳ ಬಿಜೆಪಿ ನಾಯಕರು ಸಮರ್ಥನೆ ನೀಡಿರುವುದು ನೋಡಿದಲ್ಲಿ, ಭ್ರಷ್ಟರ ರಕ್ಷಣೆಯೇ ಬಿಜೆಪಿಯ ಮೂಲಮಂತ್ರವಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷಕ್ಕೂ ಓಟಿಗಾಗಿ ನೋಟು ಹಗರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಷೀದ್ ಅಳ್ವಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ