ಮೋದಿ ಸೇರ್ಪಡೆಯಿಂದ ಬಿಜೆಪಿ ಆತ್ಮಹತ್ಯೆಯತ್ತ; ಜೈರಾಮ್

ಶನಿವಾರ, 15 ಜೂನ್ 2013 (13:06 IST)
PTI
ಬಿಜೆಪಿಯ ಸಾರ್ವತ್ರಿಕ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಪದೋನ್ನತಿ ಪಡೆದುಕೊಂಡಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ನಿನ್ನೆ ಭಸ್ಮಾಸುರನಿಗೆ ಹೋಲಿಸಿದ್ದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್‌ ರಮೇಶ್‌ ಇದರ ಬೆನ್ನಿಗೆ ಮೋದಿ ಕಾಂಗ್ರೆಸಿಗೆ ನಿಜವಾದ ಸವಾಲು ಎಂದು ಒಪ್ಪಿಕೊಂಡಿದ್ದಾರೆ.

ಮೋದಿ ಖಂಡಿತ ನಮಗೆ ಸವಾಲಾಗಲಿದ್ದಾರೆ. ಅವರು ಕೇವಲ ನಿಭಾಯಿಸಬಹುದಾದ ಸವಾಲು ಮಾತ್ರವಲ್ಲ, ಸೈದ್ಧಾಂತಿಕವಾದ ಸವಾಲು ಕೂಡ ಆಗಿದ್ದಾರೆ ಎಂದು ರಮೇಶ್‌ ಹೇಳಿದ್ದಾರೆ. ಮೋದಿಯ ಪ್ರಭಾವ ಗುಜರಾತಿಗೆ ಸೀಮಿತ ಮತ್ತು ತನಗೆ ಅವರು ಲೆಕ್ಕಕ್ಕಿಲ್ಲ ಎಂದೇ ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್‌ ಇದೇ ಮೊದಲ ಸಲ ಮೋದಿಯನ್ನು ಸವಾಲು ಎಂದು ಒಪ್ಪಿಕೊಂಡಿದೆ.

ಕಾಂಗ್ರೆಸ್‌ ಮೋದಿಗೆ ಹೆದರಿದೆ ಎನ್ನುವ ಹೇಳಿಕೆಯನ್ನು ಮಾತ್ರ ರಮೇಶ್‌ ಇದೇ ವೇಳೆ ಅಲ್ಲಗಳೆದಿದ್ದಾರೆ. ನಾವ್ಯಾಕೆ ಮೋದಿಗೆ ಹೆದರಬೇಕು? ಗುಜರಾತಿನಲ್ಲಿ ಅವರು ಮೂರು ಚುನಾವಣೆಗಳನ್ನು ಗೆದ್ದಿರಬಹುದು. ಅವರು ಉತ್ತಮ ಪ್ರಚಾರಕ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಂದು ಕಾಂಗ್ರೆಸ್‌ ಮೋದಿಗೆ ಹೆದರುತ್ತಿಲ್ಲ. ಅವರಿಗೆ ಪದೋನ್ನತಿ ನೀಡಿ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡಿದೆ. ಅದು ಸ್ವತಃ ಆತ್ಮಹತ್ಯೆಗೆ ಮುಂದಾಗಿರುವಾಗ ನಾವ್ಯಾಕೆ ತಡೆಯಬೇಕು ಎಂದು ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ