ಮೌಂಟ್ ಎವರೆಸ್ಟ್ ಪರ್ವತಾರೋಹಿಗೆ ತರಕಾರಿ ಮಾರುವ ಸ್ಥಿತಿ

ಸೋಮವಾರ, 30 ಡಿಸೆಂಬರ್ 2013 (11:38 IST)
PR
PR
ಚಂದೀಗಢ: ಇವರು ಫತೇಹಾಬಾದ್ ಜಿಲ್ಲೆಯ ತೊಹಾನಾ ಪಟ್ಟಣದ ಯುವಕ. ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಆರೋಹಣ ಮಾಡಿ ಅಲ್ಲಿ ರಾಷ್ಟ್ರಧ್ವಜ ನೆಟ್ಟಿದ್ದರು. ಆದರೆ ಈಗ ತಮ್ಮ ಕುಟುಂಬ ಪೋಷಣೆಗೆ ಮತ್ತು ಹಾಸಿಗೆ ಹಿಡಿದಿರುವ ತನ್ನ ತಂದೆಯ ಆರೈಕೆಗೆ ರಸ್ತೆಬದಿಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವಂತ ಸ್ಥಿತಿ ಬಂದಿದೆ. ನಿರುದ್ಯೋಗಿ ಯುವಕ, 24 ವರ್ಷ ವಯಸ್ಸಿನ ರಾಮಲಾಲ್ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಮೇಲೆ ಹರ್ಯಾಣ ಸರ್ಕಾರ ಭರವಸೆ ನೀಡಿದ್ದ 5 ಲಕ್ಷ ರೂ.ಗಳನ್ನು ಇನ್ನೂ ಕೊಟ್ಟಿಲ್ಲ. ಆ ಹಣ ಸಂದಾಯವಾಗಿದ್ದರೆ ಆರ್ಥಿಕ ಸಂಕಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗ್ತಿತ್ತು.

ಕ್ರೀಡಾ ವಿಜ್ಞಾನದ ಪದವೀಧರ ಮತ್ತು ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮಾ ಮಾಡಿರುವ ರಾಮ್ ಮೇ ತಿಂಗಳಲ್ಲಿ ಎವರೆಸ್ಟ್ ಶಿಖರವೇರಿದಾಗ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ 5 ಲಕ್ಷ ರೂ. ನಗದು ಬಹುಮಾನದ ಭರವಸೆ ನೀಡಿದ್ದರು. ಮೌಂಟ್ ಎವರೆಸ್ಟ್ ಶಿಖರವೇರಿದ ಮಮ್ತಾ ಸೋಧಾ ಎಂಬವರಿಗೆ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಹುದ್ದೆ ನೀಡಿ ಅವರ ಸಾಧನೆಗೆ 21 ಲಕ್ಷ ರೂ. ನಗದು ನೀಡಲಾಗಿದೆ.

ಆದರೆ ರಾಮ್‌ಗೆ ರಾಜ್ಯಸರ್ಕಾರ ಇನ್ನೂ ಹಣ ನೀಡಿಲ್ಲ. ಸ್ಥಳೀಯ ಎನ್‌ಜಿಒಗಳು ಮತ್ತು ನಿವಾಸಿಗಳು ಸ್ವಲ್ಪ ಹಣಕಾಸಿನ ನೆರವು ನೀಡಿದ್ದಾರೆ. ಯಾರಿಗೂ ಮುಜುಗರ ಉಂಟುಮಾಡಲು ತಾನು ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿಲ್ಲ. ತಂದೆಯ ಚಿಕಿತ್ಸೆಗೆ ಸಾಲ ಮಾಡಿದ್ದು, ಸಾಲ ತೀರಿಸುವುದಕ್ಕಾಗಿ ಈ ಕೆಲಸ ಮಾಡ್ತಿದ್ದೇನೆ ಎಂದು ರಾಮ್ ಹೇಳಿದ್ದಾರೆ. ಸ್ಥಳೀಯ ಶಾಸಕರ ಮತ್ತು ಹರ್ಯಾಣ ಸಚಿವ ಪರಮವೀರ್ ಸಿಂಗ್ ಮನೆ ಬಾಗಿಲು ತಟ್ಟಿದರೂ ತಮ್ಮ ಪ್ರಯತ್ನ ನಿಷ್ಪಲವಾಗಿದೆ. ಮೌಂಟ್ ಎವರೆಸ್ಟ್ ಏರಿದ ಬೇರೆ ಪರ್ವತಾರೋಹಿಗಳ ರೀತಿಯಲ್ಲೇ ತಮ್ಮನ್ನೂ ಕಾಣಬೇಕೆಂದು ರಾಮ್ ಮನವಿ ಮಾಡಿಕೊಂಡರು.

ವೆಬ್ದುನಿಯಾವನ್ನು ಓದಿ