ಯುಎಇನಲ್ಲಿ ಸಿಕ್ಕಿಬಿದ್ದ 2 ಲಕ್ಷ ಭಾರತೀಯರು

ಗುರುವಾರ, 23 ಆಗಸ್ಟ್ 2007 (20:23 IST)
ಯುಎಇ ರಾಷ್ಟ್ರದಲ್ಲಿ ಸಿಕ್ಕಿಬಿದ್ದಿರುವ ಸುಮಾರು 2 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ವಿಮಾನ ಹಾರಾಟದ ಸಂಖ್ಯೆಗಳನ್ನು ಹೆಚ್ಚಿಸುವಂತೆ ಏರ್ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್‌ಗೆ ಸೂಚಿಸಿರುವುದಾಗಿ ಸರ್ಕಾರ ತಿಳಿಸಿದೆ.
.
ಈ ಕುರಿತು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಮತ್ತು ಏರ್ ಇಂಡಿಯಾ ಅಧ್ಯಕ್ಷರ ಜತೆ ಮಾತನಾಡಿದ್ದಾಗಿ ಸಾಗರೋತ್ತರ ವ್ಯವಹಾರಗಳ ರಾಜ್ಯ ಸಚಿವ ವಯಲಾರ್ ರವಿ ರಾಜ್ಯ ಸಭೆಗೆ ಮಾಹಿತಿ ನೀಡಿದರು.
.
ಕೆಲಸದ ಪರ್ಮಿಟ್ ಇಲ್ಲದವರು ಸೆ.2ರೊಳಗೆ ದೇಶ ಬಿಡುವಂತೆ ಸಂಯುಕ್ತ ಅರಬ್ ಎಮೈರೇಟ್ಸ್(ಯುಎಇ) ರಾಷ್ಟ್ರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತುರ್ತು ಮಧ್ಯಸ್ಥಿಕೆ ವಹಿಸುವಂತೆ ಉಭಯ ಸದನಗಳ ಸದಸ್ಯರು ಒತ್ತಾಯಿಸಿದ್ದರು.

ಯುಎಇನಲ್ಲಿ ಸಿಕ್ಕಿಬಿದ್ದಿರುವ ಬಹುತೇಕ ಮಂದಿ ತೆಲುಗು ಭಾಷಿಕರಾಗಿದ್ದು, ಆ ಭಾಷೆಯ ಪರಿಜ್ಞಾನವಿರುವ ಅಧಿಕಾರಿಗಳನ್ನು ನಿಯೋಜಿಸಲು ವಿದೇಶಾಂಗ ಸಚಿವಾಲಯ ವ್ಯವಸ್ಥೆ ಮಾಡಿದೆ ಎಂದು ವಯಲಾರ್ ರವಿ ಶೂನ್ಯವೇಳೆಯಲ್ಲಿ ತಿಳಿಸಿದರು.ವಿಷಯ ಪ್ರಸ್ತಾಪಿಸಿದ ಟಿಡಿಪಿಯ ರಾವುಲ ಚಂದ್ರಶೇಖರ ರೆಡ್ಡಿ ಸಿಕ್ಕಿಬಿದ್ದಿರುವ ಜನರ ಸುರಕ್ಷಿತ ವಾಪಸಾತಿಗೆ ಆಂಧ್ರಪ್ರದೇಶ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿ, ಕೊಲ್ಲಿ ರಾಷ್ಟ್ರದಲ್ಲಿ 3.5 ಲಕ್ಷ ಭಾರತೀಯರಿದ್ದು, ಅವರಲ್ಲಿ 80,000 ಮಂದಿ ಆಂಧ್ರಪ್ರದೇಶಕ್ಕೆ ಸೇರಿದವರೆಂದು ಸಿಪಿಐನ ಎಸ್. ಸುಧಾಕರ ರೆಡ್ಡಿ ತಿಳಿಸಿದರು. ಅವರಲ್ಲಿ ಅನೇಕ ಮಂದಿಗೆ ವಿಮಾನದ ಟಿಕೆಟ್ ಖರೀದಿಸಲು ಹಣವಿಲ್ಲ. ಸರ್ಕಾರ ಅವರ ವೀಸಾ ಅವಧಿ ವಿಸ್ತರಣೆಗೆ ಪ್ರಯತ್ನಿಸಬೇಕು ಅಥವಾ ಅವರ ವಾಪಸಾತಿಗೆ ವ್ಯವಸ್ಥೆ ಮಾಡಬೇಕೆಂದು ರೆಡ್ಡಿ ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ