ಯುಪಿಎ ಸರಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಬುಧವಾರ, 24 ಏಪ್ರಿಲ್ 2013 (12:47 IST)
PTI
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮತ್ತು 2ಜಿ ಸ್ಪೆಕ್ಟ್ರಂ ಹಗರಣಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಮತ್ತು ಕಾನೂನು ಸಚಿವ ಅಶ್ವನಿ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಗದ್ದಲ ಎಬ್ಬಿಸಿದ ಪರಿಣಾಮವಾಗಿ ಉಭಯ ಸದನಗಳಲ್ಲಿ ಸತತ ಎರಡನೇ ದಿನವೂ ಯಾವುದೇ ಕಲಾಪ ನಡೆಯಲಿಲ್ಲ.

ಲಡಾಖ್‌ನಲ್ಲಿ ಚೀನದ ಅತಿಕ್ರಮಣವನ್ನು ಪ್ರತಿಭಟಿಸಿ ಸಮಾಜವಾದಿ ಪಾರ್ಟಿ ಮತ್ತು ಪಶ್ಚಿಮ ಬಂಗಾಲಕ್ಕೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸದಸ್ಯರು ಕೂಡ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದುದರಿಂದ ಕಲಾಪ ಭಂಗವಾಯಿತು.

ಲೋಕಸಭೆಯನ್ನು ಪ್ರಶ್ನೋತ್ತರ ಅವಧಿಯ ಒಂದು ಮುಂದೂಡಿಕೆಯ ಬಳಿಕ ದಿನದ ಮಟ್ಟಿಗೆ ಮುಂದೂಡಿದರೆ ರಾಜ್ಯಸಭೆಯನ್ನು ಅಪರಾಹ್ನ 2.00 ಗಂಟೆಗೆ ದಿನದ ಮಟ್ಟಿಗೆ ಮುಂದೂಡುವುದಕ್ಕಿಂತ ಮುಂಚಿತವಾಗಿ ಎರಡು ಸಲ ಮುಂದೂಡಲಾಯಿತು.

ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ಸಿಬಿಐ ಸಿದ್ಧಪಡಿಸಿರುವ ವರದಿಯಲ್ಲಿ ಹಸ್ತಕ್ಷೇಪ ಮಾಡಿರುವ ಕಾನೂನು ಸಚಿವ ಅಶ್ವನಿ ಕುಮಾರ್‌ ಅವರನ್ನು ಸಂಪುಟದಿಂದ ಕಿತ್ತು ಹಾಕಲು ಮತ್ತು ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಘೋಷಣೆಗಳನ್ನು ಕೂಗಿದರೆ ಡಿಎಂಕೆ ಸದಸ್ಯರು 2ಜಿ ಸ್ಪೆಕ್ಟ್ರಂ ಮೇಲಣ ಜೆಪಿಸಿಯ ಮುಖ್ಯಸ್ಥರಾಗಿರುವ ಕಾಂಗ್ರೆಸ್‌ ನಾಯಕ ಪಿ. ಸಿ. ಚಾಕೊ ರಾಜೀನಾಮೆಗೆ ಆಗ್ರಹಿಸಿದರು.

ಉಭಯ ಸದನಗಳು ದಿನದ ಕಲಾಪಗಳಿಗಾಗಿ ಸಮಾವೇಶಗೊಂಡ ಕೂಡಲೇ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿ 'ಪ್ರಧಾನಮಂತ್ರಿ ಇಸ್ತೀಫಾ ದೊ' ಮತ್ತು 'ಕಾನೂನು ಮಂತ್ರಿ ಕಾ ಬರ್ಖಾಸ್ತ್ ಕರೋ' ಎನ್ನುವ ಘೋಷಣೆಗಳನ್ನು ಕೂಗಿದರು. ಇತರ ವಿಪಕ್ಷಗಳ ಸದಸ್ಯರು ಅವರ ಜತೆಗೆ ದನಿಗೂಡಿಸಿದರು. ಮೇಲ್ಮನೆಯಲ್ಲೂ ಇದೇ ಮಾದರಿಯ ದೃಶ್ಯ ಕಂಡು ಬಂತು.

ವೆಬ್ದುನಿಯಾವನ್ನು ಓದಿ