ರಾಜಕೀಯದಿಂದ ಭ್ರಷ್ಟಾಚಾರ ಕಿತ್ತೊಗೆಯಿರಿ: ರಾಹುಲ್ ಗಾಂಧಿ

ಶನಿವಾರ, 28 ಆಗಸ್ಟ್ 2010 (15:07 IST)
ಹರ್ಯಾಣದ ಹಲವು ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿರುವ ಕಾಂಗ್ರೆಸ್ ಯುವ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಕರೆ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ರಾಜಕೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಈ ಸಂದರ್ಭದಲ್ಲಿ ಕೆಲವು ರಾಜಕೀಯ ಪಕ್ಷಗಳ ಸಂಘಟನೆಗಳು ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.

ಹಿಸ್ಸಾರ್‌ನಿಂದ ತನ್ನ ಭೇಟಿಗೆ ಚಾಲನೆ ಕೊಟ್ಟ ರಾಹುಲ್ ಮೊದಲು ಚೌಧರಿ ಚರಣ್ ಸಿಂಗ್ ಹರ್ಯಾಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಿ ಯುವ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕ ಕುರುಕ್ಷೇತ್ರ ಯುನಿವರ್ಸಿಟಿಗೆ ತೆರಳಿದರು. ಬಳಿಕ ಕರ್ನಲ್‌ಗೆ ತೆರಳಿ ರಾಷ್ಟ್ರೀಯ ಡೈರಿ ರಿಸರ್ಚ್ ಇನ್ಸ್‌ಟಿಟ್ಯೂಟ್‌ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳ ಜತೆ ಸಂವಹನ ಕಾರ್ಯಕ್ರಮ ನಡೆದರು.

ಕರ್ನಲ್ ಕಾಲೇಜಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರಾಹುಲ್ ಗಾಂಧಿ, ಪ್ರತಿಯೊಬ್ಬರೂ ಭ್ರಷ್ಟಾಚಾರಿಗಳು ಎಂದು ಹೇಳುವುದು ಸರಿಯಲ್ಲ; ಕೆಲವೊಮ್ಮೆ ಪ್ರಾಮಾಣಿಕ ವ್ಯಕ್ತಿಗಳು ಕೂಡ ತಾವು ತಪ್ಪು ಮಾಡದೇ ಇದ್ದರೂ ಇಂತಹ ಪ್ರಕರಣಗಳಲ್ಲಿ ಸಿಕ್ಕಿಕೊಳ್ಳುತ್ತಾರೆ ಎಂದರು.

ಹಾಗಿದ್ದೂ ರಾಜಕೀಯದಲ್ಲಿನ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಇರುವ ಏಕೈಕ ಮಾರ್ಗವೆಂದರೆ ಯುವ ಜನತೆ ರಾಜಕೀಯಕ್ಕೆ ಬರುವುದು. ನದಿಗೆ ಹೊಸ ನೀರನ್ನು ಹರಿಸುವ ಮೂಲಕ ಶುದ್ಧಗೊಳಿಸುವುದು ಸಾಧ್ಯವಿದೆ ಎಂದು ತನ್ನ ಎಂದಿನ ಮಾತನ್ನು ವಿದ್ಯಾರ್ಥಿಗಳೆದುರು ಪುನರುಚ್ಛರಿಸಿದರು.

ಅದೇ ಹೊತ್ತಿಗೆ ತನ್ನ ರಾಜಕೀಯ ಪ್ರವೇಶದ ಇತಿಹಾಸವನ್ನು ಮರೆತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಸಂಗವೂ ನಡೆಯಿತು. ಜನತೆ ತಮ್ಮ ಸ್ವಂತ ಪ್ರಭಾವದಿಂದ ಚುನಾಯಿತರಾಗಿ ರಾಜಕೀಯಕ್ಕೆ ಬರಬೇಕೇ ಹೊರತು, ತಾವು ಹುಟ್ಟಿದ ವಂಶವನ್ನು ಆಧರಿಸಿಯಲ್ಲ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು.

ರಾಜಕೀಯ ಪಕ್ಷಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊಡೆದೋಡಿಸಿ, ದೇಶವನ್ನು ಪ್ರಬಲಗೊಳಿಸಿ ಮುನ್ನಡೆಸಲು ಯುವ ಜನತೆಯಿಂದಷ್ಟೇ ಸಾಧ್ಯವಿದೆ. ಈ ಸಂಬಂಧ ವಿದ್ಯಾರ್ಥಿ ದೆಸೆಯಲ್ಲಿ ಅರಿವು ಮೂಡಿಸಿಕೊಳ್ಳುವ ಅಗತ್ಯವಿದೆ ಎಂದು ಭಾರೀ ಭದ್ರತೆಯನ್ನೊದಗಿಸಿದ್ದ ಸಭಾಂಗಣದಲ್ಲಿ ಮಾತನಾಡುತ್ತಾ ನೆಹರೂ ಕುಡಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ