ರಾಜಕೀಯ ಪಕ್ಷಗಳ ರೋಡ್ ಶೋಗೆ ಆಂಧ್ರ ಹೈಕೋರ್ಟ್ ತಡೆ

ಬುಧವಾರ, 26 ನವೆಂಬರ್ 2008 (19:48 IST)
WD
ರಾಜಕೀಯ ಅಖಾಡಕ್ಕೆ ಇಳಿದಿರುವ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ರೋಡ್ ಶೋ ನಡೆದ ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಕಳೆದ ಎರಡು ವಾರಗಳಲ್ಲಿ ಆರು ವ್ಯಕ್ತಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ರೋಡ್ ಶೋ ನಡೆಸದಂತೆ ಅಲ್ಲಿನ ಹೈಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ.

ಯಾವುದೇ ರಾಜಕೀಯ ಪಕ್ಷಗಳು ರೋಡ್ ಶೋ ಮಾಡದಂತೆ ಮುಖ್ಯ ನ್ಯಾಯಮೂರ್ತಿ ಅನಿಲ್ ರಮೇಶ್ ದಾವೆ ಮತ್ತು ನ್ಯಾಯಮೂರ್ತಿ ಆರ್.ಸುಭಾಶ್ ರೆಡ್ಡಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.

ಈ ಬಗ್ಗೆ ಹೈದರಾಬಾದ್ ಮೂಲದ 'ಅಭಿಪ್ರಾಯ' ಸಂಘಟನೆಯ ನರೇಂದ್ರ ಶರ್ಮಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಹೈಕೋರ್ಟ್ ಈ ಆದೇಶ ಹೊರಡಿಸಿದೆ.

ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಪ್ರಜಾರಾಜ್ಯಂ ಪಕ್ಷ ಸಂಘಟನೆಗಾಗಿ ಆಂಧ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯಕೈಗೊಂಡ ಸ್ಥಳಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನಸಮೂಹ ಮುತ್ತಿಕ್ಕುತ್ತಿವೆ. ಆದ್ದರಿಂದ ಹಲವಾರು ಹಿಂಸಾತ್ಮಾಕ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಹೈಕೋರ್ಟ್ ಈ ಆದೇಶ ನೀಡಿದೆ.

ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಎಲ್ಲ ರಾಜಕೀಯ ಪಕ್ಷಗಳು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಕೇಳಲಾಗಿದ್ದು, ಮುಂದಿನ ವಾರ ವಿಚಾರಣೆ ನಡೆಯಲಿದೆ.

ಪೊಲೀಸರಿಗೆ ಸಹಾಯ ಮಾಡಲು ಸುಮಾರು 250 ಖಾಸಗಿ ರಕ್ಷಣಾ ಸಿಬ್ಬಂದಿಯನ್ನು ನಾವು ನಿಯೋಜಿಸಿಕೊಂಡಿದ್ದೇವೆ. ಆದರೆ ಜನಸಮೂಹವನ್ನು ನಿಯಂತ್ರಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಜಾರಾಜ್ಯಂ ನಾಯಕ ಆಂಜನೇಯ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ