ರಾಜೀವ್ ಹಂತಕರ ಬಿಡುಗಡೆ ನಿರ್ಧಾರಕ್ಕೆ ಪುತ್ರ ರಾಹುಲ್ ದುಃಖ

ಬುಧವಾರ, 19 ಫೆಬ್ರವರಿ 2014 (18:16 IST)
PR
PR
ಅಮೇಥಿ/ನವದೆಹಲಿ: ತಮ್ಮ ತಂದೆ ರಾಜೀವ್‌ಗಾಂಧಿ ಹಂತಕರಾದ ಏಳು ಜನರನ್ನು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದ್ದರಿಂದ ತಮಗೆ ತೀವ್ರ ದುಃಖವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ನನ್ನ ತಂದೆ ಹುತಾತ್ಮರಾಗಿದ್ದರು. ನಾವು ಮರಣದಂಡನೆಗೆ ವಿರುದ್ಧವಾಗಿದ್ದೆವು. ಆದರೆ ಪ್ರಧಾನಮಂತ್ರಿಯ ಹಂತಕರನ್ನು ಬಿಡುಗಡೆ ಮಾಡಿದರೆ, ಜನಸಾಮಾನ್ಯರು ಯಾವ ರೀತಿಯ ನ್ಯಾಯವನ್ನು ನಿರೀಕ್ಷಿಸಬಹುದು ಎಂದು ರಾಹುಲ್ ಪ್ರಶ್ನಿಸಿದ್ದಾರೆ. ನಳಿನಿ ಶ್ರೀಹರನ್ ಸೇರಿದಂತೆ ಎಲ್ಲ ಏಳು ಮಂದಿ ರಾಜೀವ್ ಹಂತಕರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಜಯಲಲಿತಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ರಾಹುಲ್ ಪ್ರತಿಕ್ರಿಯೆ ಹೊರಬಿದ್ದಿದೆ.

ಸುಪ್ರೀಂಕೋರ್ಟ್ ನಿನ್ನೆ ಮುರುಗನ್, ಸಂತನ್ ಮತ್ತು ಪೆರಾರಿವಲನ್ ಅವರ ಕ್ಷಮಾದಾನದ ಅರ್ಜಿ ವಿಳಂಬವಾದ್ದರಿಂದ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿತ್ತು ಮತ್ತು ಅವರನ್ನು ಬಿಡುಗಡೆ ಮಾಡುವುದನ್ನು ತಮಿಳುನಾಡು ಸರ್ಕಾರಕ್ಕೆ ನಿರ್ಧಾರಕ್ಕೆ ಬಿಟ್ಟಿತ್ತು.

PR
PR
ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ ಮರುಗಳಿಗೆಯೇ ಕಾಂಗ್ರೆಸ್ ಪಕ್ಷ ಕೂಡ ಜಯಲಲಿತಾ ಸರ್ಕಾರದ ನಿರ್ಧಾರವನ್ನು ಬೇಜವಾಬ್ದಾರಿ ಎಂದು ಟೀಕಿಸಿದೆ. ಆದರೆ ತಮಿಳುನಾಡಿನ ಕಾಂಗ್ರೆಸ್ ನಾಯಕರು ಮಾತ್ರ ಈ ಅಭಿಪ್ರಾಯವನ್ನು ಒಪ್ಪಿಲ್ಲ. ನನಗೆ ದುಃಖವಾಗಿಲ್ಲ ಎಂದು ಕೇಂದ್ರಸಚಿವ ಚಿದಂಬರಂ ಹೇಳಿದ್ದಾರೆ.ರಾಜೀವ್ ಗಾಂಧಿ ಸಾವು ಭರಿಸಲಾಗದ ನಷ್ಟ. ಆದರೆ ಕೋರ್ಟ್ ತೀರ್ಪು ನೀಡಿದ್ದರಿಂದ ಇದನ್ನು ಸಿನಿಕತನದ ರಾಜಕೀಎಂದು ತಾವು ಭಾವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.ತಮಿಳುನಾಡು ರಾಜ್ಯದಲ್ಲಿ ಲಂಕಾದ ತಮಿಳರ ಪರ ಸಹಾನುಭೂತಿಯ ಭಾವನೆ ಇರುವುದರಿಂದ ರಾಜೀವ್ ಹತ್ಯೆ ಪ್ರಕರಣದ ರಾಜಕೀಯ ಮಹತ್ವವನ್ನು ಚಿದಂಬರಂ ಪ್ರತಿಕ್ರಿಯೆ ಬಿಂಬಿಸುತ್ತಿದೆ.

ಕೈದಿಗಳ ಬಿಡುಗಡೆಗೆ ತಮಿಳುನಾಡಿನ ಎಲ್ಲ ಪಕ್ಷಗಳು ಒಕ್ಕೋರಲ ಮನವಿ ಮಾಡಿದ್ದರು.ಕರುಣಾನಿಧಿ ಕೂಡ ಸರ್ಕಾರದ ಕ್ರಮ ಸರಿಯಾದ ನಿರ್ಧಾರ ಎಂದು ಹೇಳಿದ್ದರು.ಎಲ್‌ಟಿಟಿಇಯ ಮಹಿಳಾ ಉಗ್ರಗಾಮಿ ತನ್ನ ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ರಾಜೀವ್ ಗಾಂಧಿಯವರಿಗೆ ಗಂಧದ ಹಾರ ಹಾಕುತ್ತಾ ಆತ್ಮಾಹುತಿ ಸ್ಫೋಟ ನಡೆಸಿದ್ದರಿಂದ ರಾಜೀವ್ ದೇಹ ಚೂರು ಚೂರಾಗಿ ಬಿದ್ದಿತ್ತು. ಮದ್ರಾಸ್ ಹೈಕೋರ್ಟ್ ಆದೇಶದ ಮೇಲೆ ಹಂತಕರ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿತ್ತು. ಅದೇ ವರ್ಷ ತಮಿಳುನಾಡು ಅಸೆಂಬ್ಲಿ ನಿರ್ಣಯ ಅಂಗೀಕರಿಸಿ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ಕೋರಿಕೆ ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ