ರಾಹುಲ್‌ ಗಾಂಧಿಯೇ ಪ್ರಧಾನಿಗೆ ಅಗೌರವ ತೋರಿದರೆ ಪಾಕ್ ಪ್ರಧಾನಿ ಗೌರವಿಸುವನೇ? ಮೋದಿ

ಭಾನುವಾರ, 29 ಸೆಪ್ಟಂಬರ್ 2013 (15:20 IST)
PR
ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮಾನ ಮರ್ಯಾದೆಯನ್ನು ಸ್ವತಃ ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿಯೇ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಸ್ವಂತ ಕಾಂಗ್ರೆಸ್‌ ಪಕ್ಷದವರೇ ಪ್ರಧಾನಿಯನ್ನು ಗೌರವಿಸದಿದ್ದರೆ, ವಿದೇಶದವರು ಹೇಗೆ ಗೌರವಿಸುತ್ತಾರೆ? ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಬಗ್ಗೆ ಸ್ವತಃ ಕಾಂಗ್ರೆಸಿಗರಿಗೆ ಗೌರವವಿಲ್ಲ. ತಾಯಿ ಮಕ್ಕಳು ಇಬ್ಬರೂ ಸೇರಿ ಪ್ರಧಾನಿಯನ್ನು ಆಡಿಸುತ್ತಿದ್ದಾರೆ. ಸ್ವತಃ ರಾಹುಲ್ ಗಾಂಧಿಯೇ ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ ನಾನ್‌ಸೆನ್ಸ್‌ ಎಂದು ಕರೆದು ಪ್ರಧಾನಿಗೆ ಅಗೌರವ ತೋರಿಸಿದ್ದಾರೆ. ನಮ್ಮವರೇ ಪ್ರಧಾನಿಯನ್ನು ಹೀಗೆ ಅಗೌರವದಿಂದ ಕಂಡರೆ ಪಾಕ್ ಪ್ರಧಾನಿ ನವಾಜ್‌ ಶರೀಫ್‌ ಹೇಗೆ ತಾನೇ ಗೌರವ ನೀಡಲು ಸಾಧ್ಯ? ನನ್ನ ದೇಶದತ್ತ ಯಾರೂ ಕೂಡ ಬೆರಳು ತೋರಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮೋದಿ ಸ್ವಾಭಿಮಾನದಿಂದ ನುಡಿದರು.

ದೆಹಲಿಯ ಜಪಾನೀಸ್‌ ಮೈದಾನದಲ್ಲಿ ನಡೆದ ಬೃಹತ್‌ ಐತಿಹಾಸಿಕ ರ‍್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೇಂದ್ರ ಸರ್ಕಾರವನ್ನು ಮತ್ತು ದೆಹಲಿಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ದೇಶದ ಪ್ರಧಾನಿಯನ್ನೇ ಗೌರವಿಸುವ ಸಂಸ್ಕೃತಿ ಕಲಿಯದ ಕಾಂಗ್ರೆಸ್‌ ಪಕ್ಷ ಪ್ರಜೆಗಳನ್ನು ಹೇಗೆ ಗೌರವಿಸುತ್ತದೆ ಎಂದು ಮೋದಿ ಹರಿ ಹಾಯ್ದರು.

ವೆಬ್ದುನಿಯಾವನ್ನು ಓದಿ