ರಾಹುಲ್ ಹೇಳಿಕೆಗೆ ತಲೆಬಾಗಿದ ಪ್ರಧಾನಿ ನಪುಂಸಕ ವ್ಯಕ್ತಿ: ಬಾಬಾ ರಾಮದೇವ್

ಶುಕ್ರವಾರ, 4 ಅಕ್ಟೋಬರ್ 2013 (19:21 IST)
PTI
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಒತ್ತಡದಿಂದಾಗಿ ಕಳಂಕಿತ ರಾಜಕಾರಣಿಗಳ ಸಂರಕ್ಷಣೆ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆದಿರುವ ಸರಕಾರದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಕಿಡಿಕಾರಿ, ಪ್ರಧಾನಮಂತ್ರಿ ಒಬ್ಬ ನಪುಂಸಕ ಎಂದು ಜರಿದಿದ್ದಾರೆ.

ಕಾಂಗ್ರೆಸ್ ಪಕ್ಷದ ವರಿಷ್ಛೆ ಸೋನಿಯಾ ಪುತ್ರ ರಾಹುಲ್ ಗಾಂಧಿ ಅಗತ್ಯಕ್ಕಿಂತ ಹೆಚ್ಚಿನ ವರ್ತನೆ ತೋರುತ್ತಿದ್ದಾರೆ. ಪ್ರಧಾನಮಂತ್ರಿ ಗಂಡಸಾಗಿಯೂ ನಪುಂಸಕನಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಟೀಕಿಸಿದ್ದಾರೆ.

ಮುಂಬರುವ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 300 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ಎಂದಿನಂತೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ರಾಮದೇವ್, ಲಾಲು ಪ್ರಸಾದ್‌ ಯಾದವ್‌ ಅವರಿಗಾದಂತೆ ಕಾಂಗ್ರೆಸ್ ಪಕ್ಷದ ಶೇ.90 ರಷ್ಟು ನಾಯಕರು ಜೈಲು ಸೇರಲಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದ 60 ವರ್ಷಗಳ ಅಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರ ಎಂದೂ ಕಾಣದ ಇತಿಹಾಸವಾಗಿದೆ. ನೂರಾರು ವರ್ಷಗಳ ಕಾಲ ಆಳಿದ ಮೊಘಲರಿಗಿಂತ ಕಾಂಗ್ರೆಸ್ ನಾಯಕರು ಹೆಚ್ಚಿನ ಲೂಟಿ ಮಾಡಿದ್ದಾರೆ ಎಂದು ಯೋಗ ಗುರು ಬಾಬಾ ರಾಮದೇವ್ ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ