ರೂಪಾಯಿ ಚೇತರಿಕೆ; ಪೆಟ್ರೋಲ್‌ ಬೆಲೆ ಇಳಿಕೆ, ಎಲ್‌ಪಿಜಿ ಡೀಸೆಲ್‌ ಏರಿಕೆ.!

ಶುಕ್ರವಾರ, 13 ಸೆಪ್ಟಂಬರ್ 2013 (09:52 IST)
PTI
PTI
ರೂಪಾಯಿ ಮೌಲ್ಯ ಮತ್ತು ಪೆಟ್ರೋಲ್, ಚಿನ್ನದ ಬೆಲೆಗಳು ಒಂದನ್ನೊಂದು ಅವಲಂಬಿಸಿವೆ. ರೂಪಾಯಿ ಅಪಮೌಲ್ಯವಾದಾಗ ಅಂದ್ರೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಾಗ ಚಿನ್ನವಂತೂ ಏಕಾ ಏಕಿ ಮೇಲೇರಿತ್ತು. ಪೆಟ್ರೋಲ್ ಬೆಲೆ ಕೂಡ ಮೇಲ್ಮುಖ ಮಾಡಿತ್ತು. ಆದ್ರೀಗ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ಚಿನ್ನದ ಬೆಲೆ ಮತ್ತು ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿದಿರುವುದರಿಂದ ಇದೇ ಸೆಪ್ಟಂಬರ್‌ 15ರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ ಕನಿಷ್ಟ 1.50 ರಿಂದ 2 ರೂಪಾಯಿಗಳಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಆದರೆ, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಜನರಿಗೆ ಮತ್ತೊಂದು ಶಾಕ್ ನೀಡಿದೆ. ಅದೇನಪ್ಪಾ ಅಂದ್ರೆ ಡೀಸೆಲ್ ಮತ್ತು ಎಲ್ ಪಿಜಿ ದರ ಏರಿಕೆ ಮಾಡಲು ಸಚಿವಾಲಯ ಚಿಂತನೆ ನಡೆಸಿದೆ. ಈ ಸಂಬಂಧ ಸೆಪ್ಟೆಂಬರ್‌ 16ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಡೀಸೆಲ್‌ ಬೆಲೆಯಲ್ಲಿ ಕನಿಷ್ಟ 5 ರೂಪಾಯಿಗಳು ಮತ್ತು ಅಡುಗೆ ಅನಿಲ ದರದಲ್ಲಿ 50 ರೂಪಾಯಿಗಳಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ