ರೆಡ್ಡಿಗಳ ಓಎಂಸಿ ಗಣಿಗಾರಿಕೆ ಸ್ಥಗಿತಕ್ಕೆನಾಯ್ಡು ಆಗ್ರಹ

ಗುರುವಾರ, 12 ನವೆಂಬರ್ 2009 (10:41 IST)
PTI
ಗಣಿಧಣಿಗಳ ಒಡತನದ ಓಬಳಾಪುರಂ ಮೈನಿಂಗ್ ಕಂಪೆನಿ ನಡೆಸುತ್ತಿರುವ ಎಲ್ಲ ರೀತಿಯ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ತೆಲುಗುದೇಶಂ ಪಕ್ಷದ ಮುಖಂಡ ಎನ್.ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ ಅನಂತಪುರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

"ಗಣಿಗಾರಿಕೆ ಮಾಫಿಯಾ ಪ್ರಜಾಪ್ರಭುತ್ವ ಎದುರಿಸುತ್ತಿರುವ ಹೊಸ ಅಪಾಯ. ಈ ಮಾಫಿಯಾ ಕರ್ನಾಟಕ ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುವ ಹಂತ ತಲುಪಿದೆ. ಇಂತಹ ಸನ್ನಿವೇಶ ಪ್ರಜಾಪ್ರಭುತ್ವ ಸಂಸ್ಥೆಗಳಿಗೇ ಒಂದು ಸವಾಲಿನ ವಿಷಯ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಮಾಫಿಯಾದ ಮುಂದೆ ತಲೆತಗ್ಗಿಸಬೇಕಾದ ದುಃಸ್ಥಿತಿ ಬಂದೊದಗಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ" ಎಂದು ಅವರು ಹೇಳಿದ್ದಾರೆ.

ಒಬಳಾಪುರಂ ಮೈನಿಂಗ್ ಕಂಪೆನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪರಿಶೀಲಿಸಲು ಅವಕಾಶ ಕಲ್ಪಿಸುವ ಸಲುವಾಗಿ ಅವನ್ನು ವಿಧಾನಸಭಾ ಅಧ್ಯಕ್ಷರಿಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಎರಡು ದಿನಗಳ ಹಿಂದೆ ಒಬಳಾಪುರಂ ಮೈನಿಂಗ್ ಕಂಪೆನಿಯು ಅಗ್ರಮಗಣಿಗಾರಿಕೆ ನಡೆಸುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ತನಿಖೆಗಾಗಿ ಆಂಧ್ರ ಮುಖ್ಯಮಂತ್ರಿ ಕೆ. ರೋಸಯ್ಯ ಅವರು ತನಿಖೆಗಾಗಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿದ್ದಾರೆ. ಅಲ್ಲದೆ 10 ದಿನಗಳೊಳಗಾಗಿ ವರದಿ ಸಲ್ಲಿಸಲು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ