ರೈಲುಗಳಲ್ಲಿ ಎಟಿಎಂ ಸೌಲಭ್ಯ

ಶುಕ್ರವಾರ, 5 ಅಕ್ಟೋಬರ್ 2007 (11:36 IST)
ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹಣದ ಅವಶ್ಯಕತೆ ಕಂಡುಬಂದರೆ ಕೂಡಲೇ ಎಟಿಎಂನಿಂದ ಹಣ ತೆಗೆಯಬಹುದು. ಭಾರತೀಯ ರೈಲ್ವೆಯು ಕೆಲವು ಆಯ್ದ ರೈಲುಗಳಲ್ಲಿ ಎಟಿಎಂ ಸೌಲಭ್ಯ ಅಳವಡಿಸಲು ಯೋಜಿಸಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಎಟಿಎಂ ಯೋಜನೆ ಅಂತಿಮಗೊಳಿಸಲು ನಾವು ಕೆಲವು ಬ್ಯಾಂಕ್‌ಗಳ ಜತೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ ಅಧಿಕಾರಿ, ಪ್ರಸ್ತಾಪಿತ ಎಟಿಎಂ ಯೋಜನೆ ಅನುಷ್ಠಾನಕ್ಕೆ ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೊದಲನೆ ಹಂತವಾಗಿ, ಎಟಿಎಂಗಳನ್ನು ಜನಪ್ರಿಯ ರೈಲುಗಳಲ್ಲಿ ಅಳವಡಿಸಲಾಗುವುದು ಮತ್ತು ಬಳಿಕ ಈ ಸೌಲಭ್ಯ ಯಶಸ್ವಿಯಾದರೆ ಬೇರೆ ರೈಲುಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ರೈಲುಗಳು ಮತ್ತು ಪ್ಲಾಟ್‌ಫಾರಂಗಳಲ್ಲಿ ಎಟಿಎಂ ಸೌಲಭ್ಯದ ಜತೆಗೆ ದೇಶಾದ್ಯಂತ 6,000 ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು ಅಳವವಡಿಸಲು ರೈಲ್ವೆ ಯೋಜಿಸಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಮೊದಲಿಗೆ ಆರಂಭವಾಗುವ ಈ ಯೋಜನೆ ಅನ್ವಯ ಪ್ಲಾಟ್‌ಫಾರಂ ಮತ್ತು ಕಾದಿರಿಸಲಾಗದ ರೈಲ್ವೆ ಟಿಕೆಟ್‌ಗಳನ್ನು ಮಾರಾಟ ಮಾಡಲಿದೆ.

ವೆಬ್ದುನಿಯಾವನ್ನು ಓದಿ