ರೈಲು ನಿಲ್ದಾಣಗಳಲ್ಲಿ ಎನ್‌ಸಿಸಿ ಕೆಡೆಟ್ ನಿಯೋಜನೆ

ಶುಕ್ರವಾರ, 19 ಅಕ್ಟೋಬರ್ 2007 (12:49 IST)
ವಿಶೇಷ ದಿನಗಳ ಸಂದರ್ಭದಲ್ಲಿ, ಹೆಚ್ಚಿನ ರಕ್ಷಣೆಯನ್ನು ಒದಗಿಸುವ ಸಲುವಾಗಿ ರೈಲ್ವೇಯು ದೇಶದಾದ್ಯಂತ ಎಲ್ಲಾ ರೈಲು ನಿಲ್ದಾಣಗಳಲ್ಲಿ ಎನ್‌ಸಿಸಿ ಕೆಡೆಟ್, ಸ್ಕೌಟ್ಸ್, ಗೈಡ್ಸ್ ಮತ್ತು ಸಿವಿಲ್ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಿದೆ.

ಅಜ್ಮೀರ್ ಮತ್ತು ಲುಧಿಯಾನಾ ಬಾಂಬ್ ದಾಳಿಯ ನಂತರ ಮುನ್ನಚ್ಚರಿಕೆಯ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ರೈಲ್ವೇ ಮಂಡಳಿ ಮುಖ್ಯಸ್ಥ ಕೆ.ಸಿ.ಜೀನಾ ತಿಳಿಸಿದ್ದಾರೆ.

ಈ ಮೊದಲು ಸ್ಕೌಟ್ಸ್ ಮತ್ತು ಗೈಡ್ಸ್‌ಗಳನ್ನು ರೈಲ್ವೇಯ ಕರ್ತವ್ಯಗಳಿಗೆ ಮಾತ್ರ ಬಳಸಲಾಗುತ್ತಿತ್ತು ಆದರೆ ಈಗ ರೈಲು ನಿಲ್ದಾಣಗಳಲ್ಲಿಯೂ ನಿಯೋಜಿಸಲಾಗುತ್ತಿದೆ.

ಸ್ಕೌಟ್ಸ್, ಗೈಡ್ಸ್ ಮತ್ತು ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ ನೀಡುವ ಸುಮಾರು 350 ರೈಲ್ವೇ ಶಾಲೆಗಳಿವೆ ಅಲ್ಲದೆ ಕೆಲವು ರೈಲ್ವೇ ಉದ್ಯೋಗಿಗಳು ಸಿವಿಲ್ ರಕ್ಷಣಾ ಸಿಬ್ಬಂದಿ ತರಬೇತಿ ಪಡೆದಿದ್ದಾರೆ.

ದೀಪಾವಳಿ ಹಾಗೂ ಇತರ ವಿಶೇಷ ದಿನಗಳ ಸಂದರ್ಭಗಳಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಭಾರೀ ದಟ್ಟಣೆ ಇರುವುದರಿಂದ, ಪ್ರತಿ ರೈಲು ನಿಲ್ದಾಣಗಳಲ್ಲಿ ಎನ್‌ಸಿಸಿ ಕೆಡೆಟ್, ಸ್ಕೌಟ್ಸ್, ಗೈಡ್ಸ್ ಮತ್ತು ಸಿವಿಲ್ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಎಲ್ಲಾ ರೈಲ್ವೇ ಪ್ರಧಾನ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.

ಕೆಲವು ರೈಲ್ವೇ ನಿಲ್ದಾಣಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ್ದು, ಆ ನಿಲ್ದಾಣಗಳಲ್ಲಿ ರೈಲ್ವೇ ರಕ್ಷಣಾ ವಿಶೇಷ ದಳಗಳನ್ನು ನಿಯೋಜಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ