ಲವ್‌ ಮ್ಯಾರೇಜ್‌ ಆಗ್‌ಬೇಕಾದ್ರೆ 50 ಸಾವಿರ ರೂಪಾಯಿ ಠೇವಣಿಯಿಡಿ: ಕೋರ್ಟ್

ಸೋಮವಾರ, 23 ಡಿಸೆಂಬರ್ 2013 (15:48 IST)
PTI
ಉತ್ತರಪ್ರದೇಶದಲ್ಲಿ ಆರ್ಥಿಕವಾಗಿ ಬಡವರಾದವರಿಗೆ ಲವ್ ಮಾಡುವ ಅವಕಾಶವಿಲ್ಲ. ಯಾಕೆಂದರೆ ಲವ್ ಮಾಡಬೇಕಾದ್ರೆ ಯುವತಿಯ ಹೆಸರಲ್ಲಿ ಬ್ಯಾಂಕ್‌ನಲ್ಲಿ 50 ಸಾವಿರ ಮಡಗಿ ಎಂದು ನ್ಯಾಯಾಲಯ ಆದೇಶಿಸಿದ ವಿಚಿತ್ರ ಘಟನೆ ವರದಿಯಾಗಿದೆ.

ಇತ್ತೀಚೆಗೆ ಅಲಹಾಬಾದ್‌ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ, ಯುವತಿಯ ಕುಟುಂಬದವರ ಇಚ್ಚೆಗೆ ವಿರುದ್ಧವಾಗಿ ಯುವತಿಯನ್ನು ಮದುವೆಯಾಗಬೇಕಾದ್ರೆ ಯುವಕನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 50 ಸಾವಿರ ರೂಪಾಯಿಗಳಿರಬೇಕು. ಆ ಹಣವನ್ನು ಯುವತಿಯ ಖಾತೆಗೆ ಸ್ಥಿರ ಠೇವಣಿಯಾಗಿ ವರ್ಗಾಯಿಸಿದಲ್ಲಿ ಮಾತ್ರ ಯುವತಿಯನ್ನು ಮದುವೆಯಾಗಬಹುದು.

ನ್ಯಾಯಾಲಯ ನೀಡಿದ ತೀರ್ಪನ್ನು ರಾಜ್ಯಾದ್ಯಂತ ಪಾಲಿಸುವಂತೆ ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ದೇವರಾಜ್ ನಗರ್ ಆದೇಶ ಹೊರಡಿಸಿದ್ದಾರೆ.

ಅನೇಕ ಪ್ರಕರಣಗಳಲ್ಲಿ ಕುಟುಂಬವನ್ನು ವಿರೋಧಿಸಿ ಮದುವೆಯಾಗುವ ಯುವತಿಯರು, ನಂತರ ಗಂಡನಿಂದ ಕೂಡಾ ದೂರವಾಗಿ ತೊಂದರೆ ಅನುಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಇಂತಹ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟನೆ ನೀಡಿದೆ.

ಸಂತ ಕಬೀರ್ ನಗರ ವಾಸಿಯಾಗಿದ್ದ ರೇಖಾ ಎನ್ನುವ ಮಹಿಳೆಯ ಪ್ರಕರಣದ ವಿಚಾರಣೆ ನಡೆಸಿದ ನಂತರ ಲವ್‌ಮ್ಯಾರೇಜ್‌ಗಾಗಿ ನಗದು ಹಣವನ್ನು ಭಧ್ರತೆಯಾಗಿಡುವಂತೆ ಯುವಕರಿಗೆ ಆದೇಶ ನೀಡಿದೆ.

ಹರ್ದೋಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋವಿಂದ್ ಅಗರ್‌ವಾಲ್ ಮಾತನಾಡಿ, ಕುಟುಂಬದವರ ಇಚ್ಚೆಗೆ ವಿರುದ್ಧವಾಗಿ ಪ್ರೀತಿಸುವ ಯುವಕ, ಯುವತಿಯರು ಪರಾರಿಯಾಗುತ್ತಿದ್ದಾರೆ. ಅಪಹರಣ ಪ್ರಕರಣ ದಾಖಲಿಸಿದ ನಂತರ ಒಮ್ಮತದಿಂದ ಮತ್ತು ಪ್ರಬುದ್ಧಳಾಗಿರುವುದರಿಂದ ಇಚ್ಚೆಯಿಂದ ಓಡಿಹೋಗಿದ್ದೇವೆ ಎಂದು ಹೇಳಿಕೆ ನೀಡುವುದು ಸಾಮಾನ್ಯವಾಗಿದೆ. ಆದರೆ, ನ್ಯಾಯಾಲಯದ ತೀರ್ಪು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ, ಯುವತಿಯನ್ನು ವಿವಾಹವಾದ ನಂತರ ಆಕೆಯನ್ನು ದೂರವಾಗಿಸಲು ಪ್ರಯತ್ನಿಸುವ ಯುವಕನಿಗೆ ಶಿಕ್ಷೆಯಾಗುವುದಲ್ಲದೇ ಆತನ ಠೇವಣಿ ಹಣ ಯುವತಿಗೆ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾ ಎಸ್‌.ಪಿ ಅಗರ್‌ವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ