ಲಿಕ್ಕರ್ ಮಾಫಿಯಾದಿಂದ ಹತ್ಯೆಯಾದ ಪೇದೆಗೆ 1 ಕೋಟಿ ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್

ಮಂಗಳವಾರ, 31 ಡಿಸೆಂಬರ್ 2013 (13:15 IST)
PTI
ಶಂಕಿತ ಲಿಕ್ಕರ್ ಮಾಫಿಯಾದಿಂದ ಹತ್ಯೆಯಾದ ಪೊಲೀಸ್ ಪೇದೆ ಕುಟುಂಬಕ್ಕೆ ಆರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ 1 ಕೋಟಿ ರೂಪಾಯಿ ಪರಿಹಾರ ಧನ ಘೋಷಿಸಿದೆ.

ದಕ್ಷಿಣ ದೆಹಲಿಯ ಘಿಟ್ರೋನಿ ಗ್ರಾಮದ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಲಿಕ್ಕರ್ ಮಾಫಿಯಾ ತಂಡದ ಮೇಲೆ ರೈಡ್ ಮಾಡಿದಾಗ ದೆಹಲಿ ಸರಕಾರದ ಅಬಕಾರಿ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವರ್ಗವಾಗಿದ್ದ ಪೊಲೀಸ್ ಪೇದೆ ವಿನೋದ್ ಮೇಲೆ ಆರೋಪಿಗಳು ದಾಳಿ ನಡೆಸಿ ಹತ್ಯೆಗೈದಿದ್ದರು. ಆರೋಪಿಗಳ ದಾಳಿಯಲ್ಲಿ ಮತ್ತೊಬ್ಬ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾನೆ.

ಡಿಸೆಂಬರ್ 27 ರಂದು ರಾತ್ರಿ ಅಬಕಾರಿ ಇಲಾಖೆಯ ತಂಡ ಲಿಕ್ಕರ್ ಬ್ಯಾಗ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದಾಗ, ಆರೋಪಿಗಳ ತಂಡ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಬಡಿಗೆಗಳಿಂದ ಹಲ್ಲೆ ಮಾಡಿತ್ತು.

ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆಗಳಾದ ವಿನೋದ್ ಮತ್ತು ಸುಖವಿಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ವಿನೋದ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ, ಸುಖವಿಂದರ್ ಚೇತರಿಸಿಕೊಳ್ಳುತ್ತಿದ್ದಾನೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಒಬ್ಬನನ್ನು ಬಂಧಿಸಲಾಗಿದೆ. ಇತರ ನಾಲ್ಕು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ