ಲೋಕಪಾಲ ಪ್ರತಿಯೊಬ್ಬರ ಗಂಟಲು ಕತ್ತರಿಸುತ್ತದೆ: ಲಾಲು

ಗುರುವಾರ, 22 ಡಿಸೆಂಬರ್ 2011 (12:33 IST)
ಯುಪಿಎ ಸರಕಾರ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಮಂಡಿಸುವ ಅಧಿಕೃತ ಘೋಷಣೆ ರಾಜಕಾರಣಿಗಳಲ್ಲಿ ತಳಮಳ ಮೂಡಿಸಿದೆ. ಲೋಕಪಾಲ ಸಂಸ್ಥೆ ಜಾರಿಗೆ ತರುವುದರಿಂದ ರಾಜಕಾರಣಿಗಳು ಪ್ರಮುಖ ಗುರಿಯಾಗಬಹುದು ಎಂದು ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

PTI
ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸಂಸತ್ತಿನಲ್ಲಿ ಮಾತನಾಡಿ, ಪ್ರತಿಯೊಬ್ಬರ ಗಂಟಲು ಕತ್ತರಿಸುವ ಅಧಿಕಾರವನ್ನು ನೀಡಲು ಬಯಸುತ್ತೀರಾ? ದೇಶವನ್ನು ಕೂಪಕ್ಕೆ ತಳ್ಳುವಂತೆ ಆದೇಶಿಸುತ್ತೀರಾ? ಲೋಕಪಾಲ ಜಾರಿಗೆ ಬಂದಲ್ಲಿ ಪ್ರತಿಯೊಬ್ಬ ಪೊಲೀಸ್ ಕೂಡಾ ರಾಜಕಾರಣಿಗಳಿಗೆ ಕಪಾಳ ಮೋಕ್ಷ ಮಾಡುತ್ತಾನೆ. ಲೋಕಪಾಲನಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಇಂದು ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಮಂಡಿಸಿದಲ್ಲಿ, ಚರ್ಚೆಯ ನಂತರ ಡಿಸೆಂಬರ್ 27 ರಂದು ಮಸೂದೆಯನ್ನು ಜಾರಿಗೊಳಿಸಲಾಗುವುದು. ಮರುದಿನ ರಾಜ್ಯಸಭೆಯಲ್ಲಿ ಕೂಡಾ ಜಾರಿಗೆ ತರಲಾಗುವುದು ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.

ನ್ಯಾಯಾಲಯಗಳು ಮತ್ತು ಸಮಾಜ ಸುಧಾರಕರಾದ ಅಣ್ಣಾ ಹಜಾರೆಯಂತಹ ವ್ಯಕ್ತಿಗಳು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಲೋಕಪಾಲ ಸಂಸ್ಥೆ ಜಾರಿಯಾದಲ್ಲಿ ಅಣ್ಣಾ ಹಜಾರೆಯಂತವರಿಗೆ ಮತ್ತಷ್ಟು ಬಲ ನೀಡಿದಂತಾಗುತ್ತದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅದಕ್ಕೊಂದು ಉದಾಹರಣೆಯಾಗಿದ್ದಾರೆ ಎಂದು ಯಾದವ್ ಕಿಡಿಕಾರಿದ್ದಾರೆ.

ಲೋಕಪಾಲ ಸಂಸ್ಥೆ ಸಂಸತ್ತಿನ ಆಧೀನಕ್ಕೊಳಪಡುವುದಿಲ್ಲ. ಲೋಕಪಾಲ ಸಂಸ್ಥೆಯಲ್ಲಿರುವ ಪ್ರಕರಣಗಳು ನೇರವಾಗಿ ಪೊಲೀಸ್ ಇಲಾಖೆಗೆ ಒಳಪಡುತ್ತವೆ. ನಂತರ ಪೊಲೀಸ್ ಇಲಾಖೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್, ವಿತ್ತಸಚಿವ ಪ್ರಣಬ್ ಮುಖರ್ಜಿಗೆ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಲೋಕಪಾಲ ಮಸೂದೆಯನ್ನು ವಿರೋಧಿಸಿದ್ದು, ಲೋಕಪಾಲ ಮಸೂದೆ ಜಾರಿಗೆ ಬಂದಲ್ಲಿ ಪೊಲೀಸರಿಗೆ ಹೆಚ್ಚಿನ ಬಲ ಬಂದಂತಾಗುವುದರಿಂದ ಅವರು ನಮಗೆ ಗೌರವ ಕೊಡುವುದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರು ನಮ್ಮನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಕಳವಳ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ