ಲೋಕಪಾಲ ಬಿಲ್ ಸತ್ತಿಲ್ಲ, ಶೀಘ್ರದಲ್ಲಿ ಮಂಡಿಸುತ್ತೇವೆ: ಕಾಂಗ್ರೆಸ್

ಶನಿವಾರ, 31 ಡಿಸೆಂಬರ್ 2011 (14:55 IST)
PTI
ಲೋಕಪಾಲ ಮಸೂದೆಯ ಬಗ್ಗೆ ವಿರೋಧಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಲೋಕಪಾಲ ಬಿಲ್ ಸತ್ತಿಲ್ಲ. ಅಥವಾ ತುರ್ತುಘಟಕದಲ್ಲಿ ಕೂಡಾ ಇಲ್ಲ. ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶೀಘ್ರದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಬೆಂಬಲ ಪಡೆಯಲು ವಿಫಲವಾದ ಸರಕಾರ ಮತ್ತು ವಿರೋಧಪಕ್ಷಗಳ ಮಧ್ಯೆ ರಾಜಕೀಯವಾದ ಆರೋಪ ಪ್ರತ್ಯಾರೋಪಗಳು ಮುಂದುವರಿದಿವೆ.

ಉತ್ತರಪ್ರದೇಶದ ಶಹಾರನ್‌ಪುರ್ ನಗರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಾತನಾಡಿ, ಲೋಕಪಾಲ ಮಸೂದೆಗೆ ಸಂವಿಧಾನಿಕ ದರ್ಜೆ ದೊರೆಯುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ವಕ್ತಾರ ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಸರಕಾರಕ್ಕೆ ಸಶಕ್ತ ಲೋಕಪಾಲ ಮಸೂದೆಗೆ ಸಂವಿಧಾನಿಕ ದರ್ಜೆ ನೀಡುವ ಆಸಕ್ತಿ ಹೊಂದಿತ್ತು. ಆದರೆ, ವಿರೋಧ ಪಕ್ಷಗಳ ಅಸಹಕಾರದಿಂದ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ