ಲೋಕಪಾಲ ಮಸೂದೆ ಸೋಲಿಗೆ ಬಿಜೆಪಿ ಕಾರಣ: ಚಿದಂಬರಂ

ಶನಿವಾರ, 31 ಡಿಸೆಂಬರ್ 2011 (16:17 IST)
PTI
ಲೋಕಪಾಲ ಮಸೂದೆ ಕುರಿತಂತೆ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದ ಕೇಂದ್ರ ಗೃಹ ಖಾತೆ ಸಚಿವ ಪಿ.ಚಿದಂಬರಂ, ಬಿಜೆಪಿಗೆ ಸದನದಲ್ಲಿ ಬಹುಮತವಿದ್ದಲ್ಲಿ ಲೋಕಪಾಲ ಮಸೂದೆ ಮಂಡಿಸುವುದನ್ನು ಯಾಕೆ ತಡೆಯಲಿಲ್ಲ ಎಂದು ಕಿಡಿಕಾರಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಲೋಕಪಾಲ ಮಸೂದೆಯನ್ನು ಬೆಂಬಲಿಸಲಿಲ್ಲ. ಆದರೆ, ಲೋಕಪಾಲ ಮಸೂದೆ ಬಹುಮತದಿಂದ ಅನುಮೋದನೆ ಪಡೆಯಿತು. ಒಂದು ವೇಳೆ ಬಿಜೆಪಿ ಪಕ್ಷಕ್ಕೆ ಬಹುಮತವಿದ್ದಲ್ಲಿ ಯಾಕೆ ಹಿಂದೇಟು ಹಾಕಿತು ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ 187 ತಿದ್ದುಪಡಿಗಳಿಗೆ ಕೋರಿತು. ಆದರೆ, ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ತಿದ್ದುಪಡಿಗಳನ್ನು ತರಲು ಸಾಧ್ಯವಾಗಲಿಲ್ಲ. ಬಿಜೆಪಿಯ ಮತ್ತೊಂದು ಮುಖ ಆನಾವರಣಗೊಂಡಿತ್ತು ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಲೋಕಪಾಲ ಮಸೂದೆ ಬೆಂಬಲಿಸಿದ ಪಕ್ಷಗಳು ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸಿರುವುದು ವಿಷಾಯದಕರ ಸಂಗತಿಯಾಗಿದೆ. ಮಸೂದೆಗೆ ಅನುಮೋದನೆ ದೊರೆಯಬಾರದು ಎನ್ನುವ ಉದ್ದೇಶದಿಂದಲೇ 187 ತಿದ್ದುಪಡಿಗಳಿಗೆ ವಿಪಕ್ಷಗಳು ಒತ್ತಾಯಿಸಿದವು ಎಂದು ಆರೋಪಿಸಿದ್ದಾರೆ.

ಮುಂಬರುವ ಬಜೆಟ್ ಅಧಿವೇಶನದಲ್ಲಿ ಸಶಕ್ತ ಲೋಕಪಾಲ ಮಸೂದೆ ಮಂಡಿಸಲಾಗುವುದು. ಯಾವುದೇ ಫಿಕ್ಸಿಂಗ್ ಆಗಿಲ್ಲ. ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಖಾತೆ ಸಚಿವ ಪಿ,ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ