ಲೋಕಸಭಾ ಚುನಾವಣೆ: ಸೋನಿಯಾ, ಮೋದಿ ವಿರುದ್ಧ ಆಮ್ ಆದ್ಮಿಯಿಂದ ಪ್ರಬಲ ಅಭ್ಯರ್ಥಿ

ಶನಿವಾರ, 8 ಫೆಬ್ರವರಿ 2014 (09:24 IST)
PR
ನವದೆಹಲಿ: ಆಮ್ ಆದ್ಮಿ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡು ಘಟಾನುಘಟಿ ವ್ಯಕ್ತಿಗಳ ಎದುರು ಉನ್ನತ ಪ್ರೊಫೈಲ್ ಉಳ್ಳ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಸಾಧ್ಯತೆ ಇದೆ.

ಎಕಾನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಆಪ್ ಪಕ್ಷ, ಬಿ ಜೆ ಪಿ ಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಮತ್ತು ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣಕ್ಕಿಳಿಸಲಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎದುರು ಶಾಝಿಯಾ ಲಿಮಿ ಅವರನ್ನು ಚುನಾವಣೆಗಿಳಿಸುವ ಯೋಚನೆ ಪಕ್ಷಕ್ಕಿದೆ. ಗೋಪಾಲಕೃಷ್ಣ ಗಾಂಧಿ ಈ ವಿಷಯದಲ್ಲಿ ತಮ್ಮ ಅಂತಿಮ ನಿರ್ಧಾರವನ್ನು ತಿಳಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ನಾನು ಆಮ್ ಆದ್ಮಿ ಪಕ್ಷದ ಮೌಲ್ಯಗಳನ್ನು ಗೌರವಿಸುತ್ತೇನೆ, ಪಕ್ಷ ನಮ್ಮ ರಾಜಕೀಯ ನೀತಿಯಲ್ಲಿ ಬದಲಾವಣೆ ತರಲಿದೆ ಎಂದು ನಿರೀಕ್ಷಿಸುತ್ತೇನೆ. ಆದರೆ ನಾನು ಆಪ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಾರೆ ಮತ್ತು ಪಕ್ಷಕ್ಕೆ ಸೇರ್ಪಡೆಯಾಗಲಾರೆ ಎಂದು ಗಾಂಧಿ ಹೇಳಿದ್ದಾರೆ ಎಂಬುದಾಗಿ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಗೋಪಾಲಕೃಷ್ಣ ಗಾಂಧಿಯವರ ಸಹೋದರ ರಾಜ್ ಮೋಹನ ಗಾಂಧಿ 1989 ರಲ್ಲಿ ದಿವಂಗತ ಪ್ರಧಾನಮಂತ್ರಿ ರಾಜೀವ ಗಾಂಧಿ ಯವರ ವಿರುದ್ಧ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಶಾಝಿಯಾ ಲಿಮಿ ಕಳೆದ ವರ್ಷ ನಡೆದ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಆರ್ ಕೆ ಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 300 ಮತಗಳ ಅಂತರದಿಂದ ಸೋತಿದ್ದರು.

ಶಾಝಿಯಾ ಲಿಮಿ ಉತ್ತರಪ್ರದೇಶ ದ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕಠಿಣ ಸ್ಪರ್ಧೆ ಒಡ್ಡಲಿದ್ದಾರೆ ಎಂಬುದು ಆಮ್ ಆದ್ಮಿ ಪಕ್ಷದ ಅಭಿಪ್ರಾಯ. ಆದರೆ ಶಾಝಿಯಾ ಲಿಮಿ ಈ ವಿಷಯದಲ್ಲಿ ತಮ್ಮ ಕೊನೆಯ ನಿರ್ಧಾರವನ್ನು ತಿಳಿಸಿಲ್ಲ.

ವೆಬ್ದುನಿಯಾವನ್ನು ಓದಿ