ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದೆ: ಬಾಬಾ ರಾಮದೇವ್

ಶನಿವಾರ, 21 ಡಿಸೆಂಬರ್ 2013 (13:57 IST)
PTI
ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತ,ಎಲ್ಲಾ ಕ್ಷೇತ್ರಗಳಲ್ಲಿ ಸರಕಾರದ ವೈಫಲ್ಯತೆಯಿಂದಾಗಿ ಕಾಂಗ್ರೆಸ್ ವಿರೋಧಿ ಅಲೆ ಭುಗಿಲೆದ್ದಿದೆ ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಜನತೆ ತೋರುತ್ತಿರುವ ಬೆಂಬಲ ದೇಶದ ಜನತೆಯ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ ಎಂದು ರಾಮದೇವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೋಲಿಕೆಯಲ್ಲ. ಮೋದಿ ಕಳೆದ 10 ವರ್ಷಗಳ ಅವಧಿಯಲ್ಲಿ ಕಠಿಣ ಪರಿಶ್ರಮ, ಅರ್ಪಣೆ ಮತ್ತು ದೂರದೃಷ್ಠಿಯಿಂದಾಗಿ ರಾಜ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಡಳಿತಾವಧಿಯಲ್ಲಿ ಕೇವಲ ಭ್ರಷ್ಟಾಚಾರವನ್ನು ಮೆರೆದಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಅಡಳಿತರೂಢವಾಗಿರುವ ಯುಪಿಎ ಸರಕಾರ ಭ್ರಷ್ಟಾಚಾರವನ್ನು ತಡೆಯುವಲ್ಲಿ ವಿಫಲವಾಗಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ, ವಿದೇಶಗಳಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರುವಲ್ಲಿ ಕೂಡಾ ಕಾಂಗ್ರೆಸ್ ವಿಫಲವಾಗಿದೆ. ದೇಶಾದ್ಯಂತ ದರ ಏರಿಕೆ, ಭ್ರಷ್ಟಾಚಾರ, ಅಪರಾಧಗಳ ತಾಣವಾಗಿ ಹೊರಹೊಮ್ಮಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ವಿರೋಧಿ ಅಲೆಯಿಂದಾಗಿಯೇ ಆಮ್ ಆದ್ಮಿ ಪಕ್ಷ ಭಾರಿ ಜನಬೆಂಬಲ ಪಡೆದಿದೆ. ಆದರೆ, ಆಪ್ ಪಕ್ಷ ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷವಾಗಿ ಬಲಿಷ್ಠವಾಗಬೇಕಾಗಿದೆ ಎಂದು ಯೋಗಾ ಗುರು ಬಾಬಾ ರಾಮದೇವ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ