ವಿಚಿತ್ರ ತೀರ್ಪು : ಗ್ಯಾಂಗ್ರೇಪ್ ಎಸಗಿದ ಆರೋಪಿಗಳಿಗೆ 10 ಸಾವಿರ ದಂಡ ವಿಧಿಸಿದ ಪಂಚಾಯಿತಿ
ಸೋಮವಾರ, 31 ಮಾರ್ಚ್ 2014 (19:51 IST)
ಕಾನೂನನ್ನು ತಮಾಷೆಯಾಗಿಸುವಂತಹ ತೀರ್ಪನ್ನು ಬಿಹಾರ್ ಮುಜಾಫರ್ಪುರ್ ಜಿಲ್ಲೆಯ ರಾಜವಾಡಾ ಗ್ರಾಮದ ಪಂಚಾಯತಿಯೊಂದು ತೀರ್ಪು ನೀಡಿದೆ.
10 ಜನರ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿತ್ತು. ಅತ್ಯಾಚಾರವೆಗಿದ ಆರೋಪಿಗಳು ಪರಿಹಾರವಾಗಿ ಬಾಲಕಿಗೆ 10 ಸಾವಿರ ರೂಪಾಯಿ ನೀಡಬೇಕು. ಬಾಲಕಿಯ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಬಾರದು ಎಂದು ಪಂಚಾಯಿತಿ ತೀರ್ಪು ನೀಡಿ ಕೋಲಾಹಲ ಸೃಷ್ಟಿಸಿದೆ.
ಆದರೆ, ಬಾಲಕಿಯ ತಾಯಿ ಮುಷಾಹರಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳಾದ ಭೂಷಣ್ ಠಾಕೂರ್ ಮತ್ತು ಮಹಾವೀರ್ ಮಹತೋ ಸೇರಿದಂತೆ 10 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಧನಂಜಯ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳು ಮಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಹತ್ಯೆಗೈಯುವ ಬೆದರಿಕೆಯೊಡ್ಡುತ್ತಿದ್ದಾರೆ. ಅತ್ಯಾಚಾರವೆಸಗಿದ ವ್ಯಕ್ತಿಗಳು ತುಂಬಾ ಪ್ರಬಲವಾಗಿರುವುದರಿಂದ ತನಿಖೆಗೆ ಅಡ್ಡಿಯಾಗಲಿದೆ ಎಂದು ಬಾಲಕಿಯ ತಾಯಿ ಆತಂಕ ವ್ಯಕ್ತಪಡಿಸಿದ್ದಾಳೆ.