ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ನಗ್ನಳಾಗಿಸಿ ಗ್ರಾಮದ ಸುತ್ತು ಹಾಕಿಸಿದ ಕಾಮುಕ.

ಮಂಗಳವಾರ, 1 ಏಪ್ರಿಲ್ 2014 (13:35 IST)
ಐತಿಹಾಸಿಕ ಸಾಂಚಿ ಜಿಲ್ಲೆಯ ಕಛಿಕಾನಾಖೇಡಾ ಗ್ರಾಮದಲ್ಲಿ ಕಾಮುಕನೊಬ್ಬ 22 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಗ್ರಾಮದಾದ್ಯಂತ ನಗ್ನಳಾಗಿಸಿ ಮೆರವಣಿಗೆ ಮಾಡಿದ ಹೇಯ ಘಟನೆ ವರದಿಯಾಗಿದೆ.

ವಿವಾಹಿತ ಮಹಿಳೆ ಗ್ರಾಮಕ್ಕೆ ಹತ್ತಿರವಿರುವ ನಿರ್ಜನ ಪ್ರದೇಶದಲ್ಲಿ ಶೌಚಾಲಯಕ್ಕಾಗಿ ತೆರಳಿದ್ದಾಗ 40 ವರ್ಷ ವಯಸ್ಸಿನ ಆರೋಪಿ ಸೌಂದಾನ್ ಸಿಂಗ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಎರಡು ದಿನಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಪೂರ್ಣೇಂದ್ರ ಸಿಂಗ್ ತಿಳಿಸಿದ್ದಾರೆ.

ಅತ್ಯಾಚಾರವೆಸಗಿರುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದರಿಂದ ಆಕ್ರೋಶಗೊಂಡ ಕಾಮುಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಆಕೆಯನ್ನು ನಗ್ನಳಾಗಿಸಿ ಕೂದಲು ಹಿಡಿದು ಗ್ರಾಮದ ಬೀದಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ.

ದುಷ್ಕರ್ಮಿಯ ಕೃತ್ಯವನ್ನು ಕಂಡ ಗ್ರಾಮಸ್ಥರು ಮಹಿಳೆಗೆ ನೆರೆಯ ಮನೆಯಿಂದ ಸೀರೆಯನ್ನು ತಂದು ಧರಿಸುವಂತೆ ಕೊಟ್ಟಿದ್ದಾರೆ. ಆದರೆ, ಆರೋಪಿ ಸೀರೆಯನ್ನು ಕಿತ್ತೆಸೆದು ತನ್ನ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಆದರೆ, ಅದೇ ಸಮಯದಲ್ಲಿ ಮಹಿಳೆಯ ಪತಿ ಘಟನಾ ಸ್ಥಳಕ್ಕೆ ಬಂದು ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ.

ಅತ್ಯಾಚಾರಕ್ಕೊಳಗಾದ ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ವಶ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ