ಶ್ರೀನಗರದಲ್ಲಿ ಉಗ್ರರ ದಾಳಿ: ಎಂಟು ಯೋಧರ ಸಾವು

ಮಂಗಳವಾರ, 25 ಜೂನ್ 2013 (09:19 IST)
PR
PR
ನಗರದ ಹೊರವಲಯದಲ್ಲಿ ಶಂಕಿತ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಸೋಮವಾರ ಸಂಜೆ ಸೇನಾ ವಾಹನಗಳ ದಂಡಿನ ಮೇಲೆ ಹೊಂಚು ದಾಳಿ ನಡೆಸಿದಾಗ, ಎಂಟು ಯೋಧರು ಮೃತಪಟ್ಟರು ಮತ್ತು ಇತರ 19 ಮಂದಿ ಗಾಯಗೊಂಡರು.

ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರದಿಂದ ದ್ವಿದಿನ ಭೇಟಿ ನೀಡುವ ಸಂದರ್ಭದಲ್ಲಿ ಉಗ್ರರಿಂದ ಈ ದಾಳಿ ನಡೆಯಿತು. ಕಳೆದ ಮೂರು ದಿನಗಳಲ್ಲಿ ಇದು ಉಗ್ರರು ನಡೆಸಿದ ಎರಡನೇ ದಾಳಿಯಾಗಿದೆ.

ವಿಮಾನನಿಲ್ದಾಣ- ಲಾಲ್‌ ಚೌಕ್‌ ರಸ್ತೆಯ ಹೈದರ್‌ಪುರ ಬೈಪಾಸ್‌ನಲ್ಲಿ ಖಾಸಗಿ ಆಸ್ಪತ್ರೆಯೊಂದರ ಎದುರು ಸಂಜೆ ಉಗ್ರರು ಈ ಹೊಂಚು ದಾಳಿ ನಡೆಸಿದರು. ಎಂಟು ಮಂದಿ ಯೋಧರು ಮಡಿದರು. ಈ ದಾಳಿಯಲ್ಲಿ 17 ಮಂದಿ ಗಾಯಗೊಂಡರೆ, ಅವರು ಸ್ವಲ್ಪ ಹೊತ್ತಿನ ಬಳಿಕ ನಡೆಸಿದ ಇನ್ನೊಂದು ದಾಳಿಯಲ್ಲಿ ಇತರ ಇಬ್ಬರು ಗಾಯಗೊಂಡರು.

ಉಗ್ರರು ಮೋಟಾರ್‌ಸೈಕಲ್‌ನಲ್ಲಿ ಬಾರ್ಜುಲ್ಲಾ ತನಿಖಾ ಠಾಣೆಯತ್ತ ಸಾಗಿದರು. ಅವರು ಠಾಣೆಯಲ್ಲಿ ಕಾವಲಿದ್ದ ಸಿಆರ್‌ಪಿಎಫ್ ಮತ್ತು ಪೊಲೀಸ್‌ ತಂಡದ ಮೇಲೆ ಗ್ರೆನೇಡ್‌ ತೂರಿದರು. ಓರ್ವ ಸಿಆರ್‌ಪಿಎಫ್ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಓರ್ವ ಪೊಲೀಸ್‌ ಗಾಯಗೊಂಡರು. ಬಳಿಕ ಉಗ್ರರು ಕಾದು ನಿಂತಿದ್ದ ಕಪ್ಪು ಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಪರಾರಿಯಾದರೆಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಹೊಣೆಯನ್ನು ಪಾಕ್‌ ಪರ ಉಗ್ರಗಾಮಿ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ ವಹಿಸಿಕೊಂಡಿದೆ. ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿದ ಅದರ ವಕ್ತಾರನೋರ್ವ, ಹಲವು ದಳಗಳನ್ನು ರಚಿಸಲಾಗಿದೆ. ಇನ್ನು ಮುಂದೆಯೂ ನಗರದಲ್ಲಿ ಇಂಥದೇ ದಾಳಿಗಳನ್ನು ನಡೆಸುತ್ತೇವೆ ಎಂದು ತಿಳಿಸಿದ್ದಾನೆ. ಆದರೆ ಈ ದಾಳಿ ನಿಷೇಧಿತ ಲಷ್ಕರೆ ತಯ್ಯಬಾದ ಕೃತ್ಯವೆಂದು ಭದ್ರತಾ ಪಡೆಗಳ ಉನ್ನತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಎಕೆ ರೈಫ‌ಲ್‌ಗ‌ಳೊಂದಿಗೆ ಸೇನಾ ವಾಹನ ದಂಡಿನ ಮೇಲೆ ಮುಂದಿನಿಂದ ಮತ್ತು ಹಿಂದಿನಿಂದ ಮೂವರು ಉಗ್ರರು ಆಕ್ರಮಣ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೂವರು ಯೋಧರ ಸ್ಥಿತಿ ತೀರಾ ಗಂಭೀರವಿದೆ ಎಂದು ಸೇನೆ ಹೇಳಿದೆ.

ಹಿಜ್ಬುಲ್‌ ಉಗ್ರರು ಶನಿವಾರ ನಗರದ ಮಧ್ಯ ಭಾಗದಲ್ಲಿ ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಬಂದೋಬಸ್ತ್ ಬಿಗಿಗೊಳಿಸಿರುವ ಸಂದರ್ಭದಲ್ಲಿಯೇ ಉಗ್ರರಿಂದ ಈ ದಾಳಿ ನಡೆದಿದೆ. ಸಿಂಗ್‌ ಅವರ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ