ಸಬ್ಸಿಡಿ ಕಡಿತಕ್ಕೆ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಪ್ರತಿಪಾದನೆ

ಗುರುವಾರ, 28 ಫೆಬ್ರವರಿ 2013 (11:34 IST)
PR
PR
ಆರ್ಥಿಕ ಹಿನ್ನೆಡೆ ಹೆಚ್ಚುಕಡಿಮೆ ಮುಗಿದಿದೆ ಎಂದಿರುವ ಬಜೆಟ್‌ ಪೂರ್ವ ಆರ್ಥಿಕ ಸಮೀಕ್ಷೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.6.1ರಿಂದ ಶೇ. 6.7 ಅಭಿವೃದ್ಧಿಯ ನಿರೀಕ್ಷೆ ವ್ಯಕ್ತಪಡಿಸಿ ಇದೇ ವೇಳೆ ಸಬ್ಸಿಡಿಗಳನ್ನು ಕಡಿತಗೊಳಿಸಬೇಕೆಂದು ಬಲವಾಗಿ ಪ್ರತಿಪಾದಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ದಶಕದಲ್ಲೇ ಅತಿ ಕನಿಷ್ಠ ಶೇ. 5 ಆಗಿದ್ದರೂ 2013-14ರಲ್ಲಿ ಒಟ್ಟಾರೆ ಆರ್ಥಿಕತೆ ಶೇ. 6.1ರಿಂದ ಶೇ.6.7ರ ದರದಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವ ಪಿ. ಚಿದಂಬರಂ ಸಂಸತ್ತಿನಲ್ಲಿ ಮಂಡಿಸಿರುವ ಸಮೀಕ್ಷೆ ಹೇಳುತ್ತಿದೆ.

ಸಬ್ಸಿಡಿಗಳ ಮೇಲಣ ವೆಚ್ಚಗಳಿಗೆ ಲಗಾಮು ಹಾಕಿಕೊಳ್ಳುವುದು ಬಹಳ ನಿರ್ಣಾಯಕ. ಪೆಟ್ರೋಲಿಯಂ ಉತ್ಪನ್ನಗಳ ನಿರ್ದಿಷ್ಟವಾಗಿ ಡೀಸೆಲ್‌ ಮತ್ತು ಎಲ್‌ಪಿಜಿ ಬೆಲೆಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಸರಿದೂಗುವಂತೆ ಏರಿಸಿಕೊಳ್ಳಬೇಕು. ಕಳೆದ ಸೆಪ್ಟೆಂಬರ್‌ನಲ್ಲಿ ಡೀಸೆಲ್‌ ಬೆಲೆಯೇರಿಕೆಗೆ ಚಾಲನೆ ಕೊಡಲಾಗಿದ್ದು, ಜನವರಿಯಲ್ಲಿ ಮತ್ತೊಮ್ಮೆ ಏರಿಸಲಾಗಿದೆ. ತೈಲ ಕಂಪೆನಿಗಳಿಗೆ ಸಣ್ಣ ಪ್ರಮಾಣದಲ್ಲಿ ಡೀಸೆಲ್‌ ಬೆಲೆ ಏರಿಸಲು ಅನುಮತಿ ಕೊಟ್ಟಿರುವುದರಿಂದ ಪದೇ ಪದೇ ಬೆಲೆ ಪರಿಷ್ಕರಣೆಯಾಗಲಿದೆ. ಅಂತೆಯೇ ಗೃಹ ಬಳಕೆಯ ಸಬ್ಸಿಡಿ ಗ್ಯಾಸ್‌ ಸಿಲಿಂಡರುಗಳ ಸಂಖ್ಯೆಯನ್ನು 9ಕ್ಕೇರಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದ್ದು, ಅರ್ಥಾತ್‌ ಮುಂದಿನ ದಿನಗಳಲ್ಲಿ ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವ ಸೂಚನೆಯನ್ನು ಕೊಟ್ಟಿದೆ.

ಮುಂದಿನ ತಿಂಗಳಿಗಾಗುವಾಗ ಹಣದುಬ್ಬರ ಶೇ.6.2 ಮತ್ತು ಶೇ.6.6ರ ನಡುವೆ ಇರುತ್ತದೆ ಎಂದು ಭವಿಷ್ಯ ನುಡಿದಿರುವ ಸಮೀಕ್ಷೆ 2012ರ ಡಿಸೆಂಬರ್‌ನಲ್ಲಿ ಎರಡಂಕಿಗೆ ತಲುಪಿರುವ ಆಹಾರ ಬೆಲೆಯುಬ್ಬರಕ್ಕೆ ಕಳವಳ ವ್ಯಕ್ತಪಡಿಸಿದೆ.

ಪರಿಣಾಮಕಾರಿ ಕ್ರಮಗಳ ಮೂಲಕ ಸಬ್ಸಿಡಿಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುವ ಅಗತ್ಯವಿದೆ ಅಂತೆಯೇ ಅದರ ವಿತರಣೆಯಲ್ಲಾಗುವ ಸೋರಿಕೆಯನ್ನು ತಡೆಗಟ್ಟಬೇಕು. ನೇರ ಫ‌ಲಾನುಭವ ವರ್ಗಾವಣೆ (ಡಿಬಿಟಿ) ಇಂತಹ ಕ್ರಮಗಳಲ್ಲಿ ಒಂದು. ರಸಗೊಬ್ಬರ ಸಬ್ಸಿಡಿಯಿಂದ ಬೀಳುತ್ತಿರುವ ಸಬ್ಸಿಡಿ ಹೊರೆಯನ್ನು ಇಳಿಸುವ ಸಲುವಾಗಿ ರಸಗೊಬ್ಬರ ಬೆಲೆ ನಿಗದಿ ವಿಧಾನವನ್ನು ಪರಿಷ್ಕರಿಸಲು ಸರಕಾರ ಮುಂದಾಗಿದೆ. ಅಂತೆಯೇ ಬಡವರು ಕಡಿಮೆ ಆಹಾರ ಬಳಸಿ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸಬ್ಸಿಡಿಗೆ ಆದ್ಯತೆ ಕೊಡುತ್ತಿದೆ ಎಂದಿದೆ.

ವೆಬ್ದುನಿಯಾವನ್ನು ಓದಿ