ಸರಕಾರಿ ನೌಕರಿಯಲ್ಲಿ ಪುರುಷರಿಗೆ ಶೇ.67ರ ಮೀಸಲಾತಿ!

ಬುಧವಾರ, 16 ಫೆಬ್ರವರಿ 2011 (09:04 IST)
ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ಜಾತಿ/ವರ್ಗದವರಿಗೆ, ಮಿಲಿಟರಿಯವರಿಗೆ, ವಿಕಲ ಚೇತನರಿಗೆ ಮೀಸಲಾತಿಯಿರುವುದು ಪ್ರತಿಯೊಬ್ಬರಿಗೂ ಗೊತ್ತು. ಆದರೆ ಹರ್ಯಾಣದಲ್ಲಿ ಕೊಂಚ ಭಿನ್ನ ಮತ್ತು ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಿಗೇ ಮೀಸಲಾತಿ ಒದಗಿಸಲಾಗಿದೆ.

ಹರ್ಯಾಣವು ಈ ನೀತಿಯನ್ನು ಜಾರಿ ಮಾಡಿರುವುದು ಸರಕಾರಿ ಉದ್ಯೋಗಕ್ಕೆ. ಅದರಲ್ಲೂ ಶಾಲಾ ಶಿಕ್ಷಕರ ನೇಮಕಾತಿಗೆ. ಇಲ್ಲಿ ಪುರುಷರಿಗೆ ಶೇ.67ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಉಳಿದ ಶೇ.33ರಷ್ಟನ್ನು ಮಹಿಳೆಯರಿಗೆ ಉಳಿಸಲಾಗಿದೆ. ಅಂದರೆ, ಶೇ.33ನ್ನು ಹೊರತುಪಡಿಸಿದ ಸಾಮಾನ್ಯ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ!

ಇದು ಖಚಿತಗೊಂಡಿರುವುದು ಮಾಹಿತಿ ಹಕ್ಕು ಕಾಯ್ದೆ ಮೂಲಕ ಹರ್ಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ ಉತ್ತರಿಸಿರುವುದರಿಂದ.

'ಸಾಮಾನ್ಯ ವಿಭಾಗದಲ್ಲಿ ಯಾವುದೇ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿಲ್ಲ' ಎಂದು ದೈಹಿಕ ಶಿಕ್ಷಕರ ಸಾಮಾನ್ಯ ವಿಭಾಗದ 627 ಹುದ್ದೆಗಳಿಗೆ ಮಾಡಲಾಗಿರುವ ನೇಮಕಾತಿ ಕುರಿತು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.

ಸರಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಕೆಲ ಸಮಯದ ಹಿಂದೆ ಹರ್ಯಾಣ ಲೋಕಸೇವಾ ಆಯೋಗ ಜಾಹೀರಾತೊಂದನ್ನು ಪ್ರಕಟಿಸಿತ್ತು. ಒಟ್ಟು 1,317 ಅಭ್ಯರ್ಥಿಗಳ ಅಗತ್ಯ ನಮಗಿದ್ದು, ಶೇ.67ರಷ್ಟು ಹುದ್ದೆಗಳನ್ನು ಪುರುಷರಿಗೆ ಹಾಗೂ ಶೇ.33ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಆ ಜಾಹೀರಾತು ಹೇಳಿತ್ತು.

ಈ ಎಲ್ಲಾ ಬೆಳವಣಿಗೆಗಳು ಸಹಜವಾಗಿಯೇ ಸಮಾಜದ ವಿವಿಧ ಸ್ತರಗಳಲ್ಲಿ ಪ್ರತಿರೋಧವನ್ನು ಎದುರಿಸುತ್ತಿದೆ. ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು ಸರಿ, ಆದರೆ ಪುರುಷರಿಗೆ ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ದೂರನ್ನೂ ನೀಡಲಾಗಿದೆ.

'ಮೀಸಲಾತಿಯ ನಿಜವಾದ ಮನೋಧರ್ಮದ ಪ್ರಕಾರ ಶೇ.33ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಶೇ.67ರಲ್ಲಿ ಪುರುಷರು ಮತ್ತು ಮಹಿಳೆಯರು ನೇಮಕಗೊಳ್ಳಬೇಕು' ಎಂದು ಪಂಜಾಪ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯವಾದಿ ಕುಲ್ಬೀರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಶೈಕ್ಷಣಿಕ ಫಲಿತಾಂಶಗಳಲ್ಲಿ ಹುಡುಗರಿಗಿಂತ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವ ವಾಸ್ತವ ವಿಚಾರದ ಹೊರತಾಗಿಯೂ, ಸಾಮಾನ್ಯ ವಿಭಾಗದಲ್ಲಿ ಯಾವುದೇ ಮಹಿಳೆಯನ್ನು ನೇಮಕ ಮಾಡಿಕೊಳ್ಳದೇ ಇರುವ ಈ ಹಾಸ್ಯಾಸ್ಪದ ಮೀಸಲಾತಿ ನೀತಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಅಚ್ಚರಿ ತಂದಿದೆ.

ಲೋಕಸೇವಾ ಆಯೋಗ ಮತ್ತು ಸ್ಟಾಫ್ ಸೆಲೆಕ್ಷನ್ ಕಮಿಷನ್ ನಡೆಸಿರುವ ನೇಮಕಾತಿ ಪ್ರಕ್ರಿಯೆ ಕುರಿತು ವಿವರಣೆ ನೀಡಿರುವ ಹರ್ಯಾಣದ ಶಾಲಾ ಶಿಕ್ಷಣ ಮಹಾ ನಿರ್ದೇಶಕರ ವಿಜೇಂದ್ರ ಕುಮಾರ್, ಹಲವು ಕಡೆಗಳಿಂದ ಈ ಕುರಿತು ಪ್ರಶ್ನೆಗಳು ಬರುತ್ತಿರುವುದರಿಂದ ನಾವು ಈ ಸಂಬಂಧ ಸರಕಾರದಿಂದ ಸ್ಪಷ್ಟನೆ ಕೇಳಿದ್ದೇವೆ ಎಂದಿದ್ದಾರೆ.

ಸರಕಾರಿ ನೌಕರಿಯಲ್ಲಿನ ಮೀಸಲಾತಿ ನೀತಿಯನ್ನು ತಿರುಚಲು ಹೊರಟಿರುವ ಹರ್ಯಾಣ ಸರಕಾರವನ್ನು ತಡೆಯಬೇಕು ಎಂದು ಸಿಪಿಎಂ ಸೇರಿದಂತೆ ಪ್ರತಿಪಕ್ಷಗಳು ರಾಜ್ಯಪಾಲ ಜಗನ್ನಾಥ್ ಪಹಾಡಿಯಾ ಅವರನ್ನು ಒತ್ತಾಯಿಸಿವೆ. ಇದು ಸಂವಿಧಾನದ ನಿಯಮಾವಳಿಗಳ ಸ್ಪಷ್ಟ ಮತ್ತು ಸಂಪೂರ್ಣ ಉಲ್ಲಂಘನೆ ಎಂದು ಹೇಳಿವೆ.

ವೆಬ್ದುನಿಯಾವನ್ನು ಓದಿ