ಸಾಮೂಹಿಕ ಅತ್ಯಾಚಾರದಲ್ಲಿ ಕುರಿಯನ್ ಭಾಗಿ: ಆರೋಪಿ

ಮಂಗಳವಾರ, 12 ಫೆಬ್ರವರಿ 2013 (12:49 IST)
PTI
1996ರಲ್ಲಿ 40 ದಿನ 40ಕ್ಕೂ ಹೆಚ್ಚು ಮಂದಿ ಕೇರಳದ ಯುವತಿಯೊಬ್ಬಳ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯಸಭೆಯ ಉಪ ಸಭಾಪತಿ ಪಿ. ಜೆ. ಕುರಿಯನ್‌ ಶಾಮೀಲಾಗಿದ್ದಾರೆಂದು ಪ್ರಕರಣದ ಮೂರನೇ ಆರೋಪಿ ಧರ್ಮರಾಜನ್‌ ಆರೋಪಿಸಿದ್ದಾರೆ. ಇದರೊಂದಿಗೆ ಕುರಿಯನ್‌ ವಿರುದ್ಧ ಕೇರಳ ಅಸೆಂಬ್ಲಿ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಪ್ರತಿಭಟನೆಗೆ ಪುಷ್ಟಿ ಸಿಕ್ಕಂತಾಗಿದೆ.

ಪೆರೋಲ್‌ ಮೇಲೆ ಬಿಡುಗಡೆಯಾದ ಬಳಿಕ ನಾಪತ್ತೆಯಾಗಿರುವ ಆರೋಪಿ ಧರ್ಮರಾಜನ್‌ ಎಂಬಾತ ಮೈಸೂರಿನ ಅಜ್ಞಾತ ಸ್ಥಳವೊಂದರಿಂದ ಮಲಯಾಳಂನ 'ಮಾತೃಭೂಮಿ' ಪತ್ರಿಕೆ ಜತೆಗೆ ಮಾತನಾಡಿ ಈ ಆರೋಪ ಮಾಡಿದ್ದಾನೆ.

'ಆಗ 16 ವರ್ಷದವಳಾಗಿದ್ದ ಸಂತ್ರಸ್ತ ಯುವತಿ ಸತತ 40 ದಿನಗಳ ಕಾಲ 40ಕ್ಕೂ ಹೆಚ್ಚು ಮಂದಿಯಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆ. 19ನೇ ದಿನ ಕುರಿಯನ್‌ ತಮ್ಮ ಅಂಬಾಸಿಡರ್‌ ಕಾರಿನಲ್ಲಿ ಸಂಜೆ 6.30ಕ್ಕೆ ವಂಡಿಪೆರಿಯಾರ್‌ನಿಂದ ಕೊಚ್ಚಿಯ ಅತಿಥಿಗೃಹಕ್ಕೆ ಪ್ರಯಾಣಿಸಿದರು. ಉಣ್ಣಿ ಮತ್ತು ಜಮಾಲ್‌ ಎಂಬುವವರು ಎರಡು ಕಾರುಗಳಲ್ಲಿ ಅವರನ್ನು ಹಿಂಬಾಲಿಸಿದರು. ಅತಿಥಿಗೃಹದಲ್ಲಿ ಕುರಿಯನ್‌ ಬಾಲಕಿಯ ಜತೆಗೆ ಸುಮಾರು ಅರ್ಧತಾಸು ಕಳೆದಿದರು' ಎಂದು ಧರ್ಮರಾಜನ್‌ ಬಹಿರಂಗಪಡಿಸಿದ್ದಾನೆ.

ತನಿಖಾಧಿಕಾರಿ ಸಿಬಿ ಮ್ಯಾಥ್ಯೂಸ್‌ ಉದ್ದೇಶಪೂರ್ವಕವಾಗಿ ಕುರಿಯನ್‌ ಹೆಸರನ್ನು ಕೈಬಿಟ್ಟಿದ್ದಾರೆ. ಎಫ್ಐಆರ್‌ನಲ್ಲಿ ಕುರಿಯನ್‌ ಹೆಸರು ಸೇರ್ಪಡೆಯಾಗುವುದು ಮ್ಯಾಥ್ಯೂಸ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆದರೆ ತನಿಖಾ ತಂಡದಲ್ಲಿದ್ದ ಇನ್ನೊಬ್ಬ ಅಧಿಕಾರಿ ಕೆ.ಕೆ. ಜೋಶುವಾ ಅವರಿಗೆ ಇದು ಸಮ್ಮತವಾಗಿರಲಿಲ್ಲ. ಅವರು ಕುರಿಯನ್‌ ಈ ಪ್ರಕರಣದಲ್ಲಿ ಶಾಮೀಲಾಗಿರುವುದನ್ನು ಬಹಿರಂಗಪಡಿಸಬೇಕೆಂದು ಪ್ರತಿಪಾದಿಸುತ್ತಿದ್ದರು ಎಂದು ಧರ್ಮರಾಜನ್‌ ತಿಳಿಸಿದ್ದಾನೆ.

ಕುರಿಯನ್‌ ಅವರನ್ನು ಆರೋಪಿಗಳನ್ನು ಗುರುತಿಸುವ ಪರೇಡ್‌ನ‌ಲ್ಲಿ ಹಾಜರುಪಡಿಸಲಾಗಿಲ್ಲ. ಜಿ. ಸುಕುಮಾರನ್‌ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ನ್ಯಾಯಾಲಯದ ದಾರಿ ತಪ್ಪಿಸಿದೆ. ಆದರೆ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದು ಕುರಿಯನ್‌ ಅಲ್ಲ. ಅದು ಬಾಜಿ ಎನ್ನುವ ಇನ್ನೋರ್ವ ವ್ಯಕ್ತಿ ಎಂದು ಧರ್ಮರಾಜನ್‌ ತಿಳಿಸಿದ್ದಾನೆ ಹಾಗೂ ಎರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾನೆ.

ವಿಧಾಸನಸಭೆಯಲ್ಲಿ ಆಕ್ರೋಶ:

ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ 'ಸಂತ್ರಸ್ತೆ'ಯು ನಿಜವಾದ ಸಂತ್ರಸ್ತೆಯಲ್ಲ. ಆಕೆಯೊಬ್ಬ ವೇಶ್ಯೆ. ಆಕೆಯನ್ನು ಯಾರೂ ಆತ್ಯಾಚಾರ ಮಾಡಿಲ್ಲ ಎಂದು ಈ ಹಿಂದೆ 35 ಆಪಾದಿತರನ್ನು ಖುಲಾಸೆಗೊಳಿಸಿದ್ದ ಕೇರಳ ಹೈಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಆರ್‌. ಬಸಂತ್‌ ನೀಡಿರುವ ವಿವಾದಗ್ರಸ್ತ ಹೇಳಿಕೆಯನ್ನು ಪ್ರತಿಭಟಿಸಿ ವಿಪಕ್ಷ ಸಭಾತ್ಯಾಗ ಮಾಡುವುದರೊಂದಿಗೆ ಕೇರಳ ಅಧಿವೇಶನ ಕೂಡ ಬಲಿಯಾಯಿಯತು. ಇದಲ್ಲದೆ, ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕೋರ್ಟಿನಲ್ಲಿ ಬಸಂತ್‌ ವಿರುದ್ಧ ಮೊಕದ್ದಮೆಯೊಂದು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ