ಸಾಲಿಸಿಟರ್ ಜನರಲ್ ರಾಜೀನಾಮೆ: ಮೊಯ್ಲಿ, ಸಿಬಲ್ ಇಕ್ಕಟ್ಟಿಗೆ

ಸೋಮವಾರ, 11 ಜುಲೈ 2011 (19:44 IST)
ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರ ಸಚಿವ ಸಂಪುಟ ಪುನಾರಚನೆಯ ತಲೆನೋವಿನಿಂದ ನರಳುತ್ತಿದ್ದರೆ, ಅವರ ಸಂಪುಟದ ಇಬ್ಬರು ಹಿರಿಯ ಸಚಿವರಾದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮಂತ್ರಿ ಕಪಿಲ್ ಸಿಬಲ್ ಹಾಗೂ ಕಾನೂನು ಮಂತ್ರಿ ವೀರಪ್ಪ ಮೊಯ್ಲಿ ಬೇರೆಯೇ ತಲೆಬಿಸಿಯಲ್ಲಿ ಮುಳುಗಿದ್ದಾರೆ. ಅದೆಂದರೆ, ಸರಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಹ್ಮಣ್ಯಂ ಅವರ ರಾಜೀನಾಮೆ. ಅದರಲ್ಲೂ ಅವರು ನೇರವಾಗಿ ಪ್ರಧಾನಿಗೇ ಪತ್ರ ಬರೆದು ತಮ್ಮ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುಬ್ರಹ್ಮಣ್ಯಂ ಅವರ ರಾಜೀನಾಮೆ ಕುರಿತ ಕಾರಣಗಳ ಬಗ್ಗೆ ಕೇಂದ್ರ ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ನಿರ್ಲಕ್ಷ್ಯ ಧೋರಣೆ ತಾಳಿದ್ದರೆ, ರಾಜೀನಾಮೆಗೂ 2ಜಿ ಹಗರಣದ ಕುರಿತಾಗಿ ನಿರ್ವಹಣೆಗೂ ಸಂಬಂಧವಿದೆ ಎಂಬ ವಾದಗಳನ್ನು ಕಾನೂನು ಸಚಿವ ಮೊಯಿಲಿ ತಳ್ಳಿ ಹಾಕಿದ್ದಾರೆ. ಈ ಮೂಲಕ, ರಾಜೀನಾಮೆಗೆ ತಾನು ಕಾರಣವಲ್ಲ ಎಂಬ ಭಾವನೆ ಬರುವಂತೆ ಪ್ರಯತ್ನಿಸಿದ್ದಾರೆ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರನ್ನು ಭಾನುವಾರ ಭೇಟಿಯಾಗಿದ್ದ ಗೋಪಾಲ ಸುಬ್ರಹ್ಮಣ್ಯಂ, ತಮ್ಮ ರಾಜೀನಾಮೆಗೆ ಕಾರಣವನ್ನು ವಿವರಿಸಿದ್ದರು.

ಸುಪ್ರೀಂ ಕೋರ್ಟಿನಲ್ಲಿ 2ಜಿ ಹಗರಣದ ಕುರಿತಾಗಿ ಗೋಪಾಲ ಸುಬ್ರಹ್ಮಣ್ಯಂ ಅವರು ವಾದಿಸಿದ ರೀತಿಯು ಸರಕಾರದ ಅಸಮಾಧಾನಕ್ಕೆ ಕಾರಣವಾಗಿತ್ತೆಂಬ ವರದಿಗಳನ್ನೂ ಮೊಯಿಲಿ ತಳ್ಳಿ ಹಾಕಿದ್ದಾರೆ. ಇದೇ ವೇಳೆ, ಸಾಲಿಸಿಟರ್ ಜನರಲ್ ಜೊತೆ ಮಾತುಕತೆ ನಡೆಸಿ ರಾಜೀನಾಮೆ ನಿರ್ಧಾರ ಮರುಪರಿಶೀಲಿಸುವುದಾಗಿ ಮನವೊಲಿಸುವುದಾಗಿ ಮೊಯಿಲಿ ಹೇಳಿದ್ದಾರೆ.

ತಮ್ಮ ಹೆಸರೂ ಕೇಳಿಬಂದಿರುವ, ರಿಲಯನ್ಸ್ ಕಮ್ಯುನಿಕೇಶನ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸರಕಾರದ ಪರ ವಾದಿಸಲು ಕಪಿಲ್ ಸಿಬಲ್ ಅವರು ಖಾಸಗಿ ವಕೀಲ ರೋಹಿಂಗ್ಟನ್ ನಾರಿಮನ್ ಅವರನ್ನು ನೇಮಿಸಿರುವುದರಿಂದಾಗಿ ಗೋಪಾಲ ಸುಬ್ರಹ್ಮಣ್ಯಂ ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.
ಈ ಕುರಿತು ಕಪಿಲ್‌ ಸಿಬಲ್‌ ಅವರನ್ನು ಮಾಧ್ಯಮ ಸಿಬ್ಬಂದಿ ಸಂಪರ್ಕಿಸಿದಾಗ, ಈ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು. ತಮಗಿರುವ ಅಧಿಕಾರದ ಆಧಾರದ ಮೇಲೆ ಖಾಸಗಿ ವಕೀಲರನ್ನು ನೇಮಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಹಲವಾರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಉದಾಹರಣೆಗೆ, ಕಳೆದ ನವೆಂಬರ್ ತಿಂಗಳಲ್ಲಿ ಅಂದಿನ ಟೆಲಿಕಾಂ ಸಚಿವ ಎ.ರಾಜಾ ಅವರ ಮೇಲೆ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಬರೆಯಲಾದ ಪತ್ರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿಫಲರಾಗಿದ್ದ ಬಗ್ಗೆ ಸುಪ್ರೀಂ ಕೋರ್ಟು ಛೀಮಾರಿ ಹಾಕಿತ್ತು. ಪ್ರಧಾನಿಯಿಂದಲೇ ಸುಪ್ರೀಂ ಕೋರ್ಟು ವಿವರಣೆ ಕೇಳುವಂತಾದುದು ಸರಕಾರದ ವರ್ಚಸ್ಸಿಗೆ ದೊಡ್ಡ ಹೊಡೆತ ಎಂದೇ ಭಾವಿಸಲಾಗಿತ್ತು. ಇದಲ್ಲದೆ, ವಿದೇಶದಿಂದ ಕಪ್ಪು ಹಣ ವಾಪಸ್ ತರುವ ವಿಚಾರ, ಕಾಮನ್ವೆಲ್ತ್ ಗೇಮ್ಸ್ ಹಗರಣ ಮುಂತಾದವುಗಳಲ್ಲಿಯೂ ಸುಪ್ರೀಂ ಕೋರ್ಟು ಕೇಂದ್ರಕ್ಕೆ ಬಿಸಿ ಮುಟ್ಟಿಸಿ, ಸ್ವಿಸ್ ಬ್ಯಾಂಕ್ ಕಪ್ಪು ಹಣಕ್ಕೆ ಸಂಬಂಧಿಸಿ ತಾನಾಗಿಯೇ ವಿಶೇಷ ತನಿಖಾ ತಂಡವೊಂದನ್ನು ರಚಿಸಿತ್ತು. ಇದು ಕೂಡ ಆಡಳಿತಕ್ಕೆ ದೊಡ್ಡ ಆಘಾತವೆಂದೇ ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ