ಸೂರ್ಯ ನಮಸ್ಕಾರ; ಫತ್ವಾ ನಂತ್ರ ಈಗ ಕ್ರಿಶ್ಚಿಯನ್‌ರ ವಿರೋಧ

ಗುರುವಾರ, 12 ಜನವರಿ 2012 (18:30 IST)
ಗಿನ್ನೆಸ್ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಕೈಗೊಂಡ ಸೂರ್ಯ ನಮಸ್ಕಾರ ಕಾರ್ಯಕ್ರಮದ ವಿರುದ್ಧ ಮುಸ್ಲಿಮ್ ಮುಖಂಡರು ಫತ್ವಾ ಹೊರಡಿಸಿದ್ದ ಬೆನ್ನಲ್ಲೇ, ಇದೀಗ ಸೂರ್ಯ ನಮಸ್ಕಾರದ ವಿರುದ್ಧ ಕ್ರಿಶ್ಚಿಯನ್ ಸಂಘಟನೆ ಕೂಡ ತಿರುಗಿಬಿದ್ದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ನೇತೃತ್ವದ ಮಧ್ಯಪ್ರದೇಶ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಗುರುವಾರ ವಿಶ್ವದಾಖಲೆಯ 'ಸೂರ್ಯ ನಮಸ್ಕಾರ' ಮಾಡುವ ಕಾರ್ಯಕ್ರಮಕ್ಕೆ ನಿರ್ಧರಿಸಿತ್ತು.

ಆದರೆ ಸೂರ್ಯ ನಮಸ್ಕಾರ ಕಾರ್ಯಕ್ರಮದ ವಿರುದ್ಧ ಇದೊಂದು ಇಸ್ಲಾಮ್ ವಿರೋಧಿ ಕಾರ್ಯಕ್ರಮ. ಇದು ಇಸ್ಲಾಮ್ ಧರ್ಮಕ್ಕೆ ವಿರುದ್ಧವಾದದ್ದು ಎಂದು ಹೇಳಿ ಫತ್ವಾ ಹೊರಡಿಸಿತ್ತು.

ಮುಸ್ಲಿಮರ ವಿರೋಧದ ಬೆನ್ನಲ್ಲೇ ಕ್ರಿಶ್ಚಿಯನ್ ಸಂಘಟನೆಗಳು ಸೂರ್ಯ ನಮಸ್ಕಾರದ ವಿರುದ್ಧ ಧ್ವನಿ ಎತ್ತಿವೆ. ಸೂರ್ಯ ನಮಸ್ಕಾರ ಪಕ್ಕಾ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸೂರ್ಯ ಹಿಂದೂಗಳ ದೇವರು ಎಂದು ಅಭಿಪ್ರಾಯವ್ಯಕ್ತಪಡಿಸಿದೆ.

ಸೂರ್ಯ ನಮಸ್ಕಾರ ಕಾರ್ಯಕ್ರಮದ ಬಗ್ಗೆ ಕ್ರಿಶ್ಚಿಯನ್ ಸಮುದಾಯ ನಡೆಸುತ್ತಿರುವ ಕೆಲವು ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದು, ಸಂವಿಧಾನದ ಪ್ರಕಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಯಾರನ್ನೂ ಒತ್ತಾಯ ಮಾಡುವಂತಿಲ್ಲ. ಅಲ್ಲದೇ ಧಾರ್ಮಿಕ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಡೆಸುವಂತೆ ಸೂಚನೆ ನೀಡುವುದು ಕೂಡ ವಿರೋಧವಾದದ್ದು ಎಂದು ತಿಳಿಸಿದೆ.

ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಎಲ್ಲಾ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಸರ್ಕಾರ ಮೌಖಿಕವಾಗಿ ನಿರ್ದೇಶನ ನೀಡಿದೆ. ಆದರೆ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂಬುದು ಕಡ್ಡಾಯವಲ್ಲ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಸ್ಪಷ್ಟಪಡಿಸಿದ್ದರು.

ವೆಬ್ದುನಿಯಾವನ್ನು ಓದಿ