ಸೂರ್ಯ ನಮಸ್ಕಾರ; ಬಿಜೆಪಿ-ಮುಸ್ಲಿಮರ ಮ್ಯಾಚ್‌ ಫಿಕ್ಸಿಂಗ್: ದಿಗ್ವಿಜಯ್ ಸಿಂಗ್

ಗುರುವಾರ, 12 ಜನವರಿ 2012 (13:13 IST)
PR
ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಗಿನ್ನೆಸ್ ದಾಖಲೆ ಮಾಡುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ 'ಸೂರ್ಯ ನಮಸ್ಕಾರ' ಕಾರ್ಯಕ್ರಮವು ಬಿಜೆಪಿ ಮತ್ತು ಜಮಾತ್ ಇಸ್ಲಾಂ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ದಿಗ್ವಿಜಯ್ ಸಿಂಗ್ ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿನ ಟ್ವಿಟರ್‌ನಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯರ ಪುರಾತನ ಯೋಗಶಾಸ್ತ್ರದ ಅಂಗವಾಗಿರುವ 'ಸೂರ್ಯ ನಮಸ್ಕಾರ' ಯೋಗಾಭ್ಯಾಸವನ್ನು ರಾಜಕೀಯ ಲಾಭ ಪಡೆಯಲು ಬಳಸಿಕೊಳ್ಳುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷವನ್ನು ದೂರಿದ್ದಾರೆ.

ಸೂರ್ಯ ನಮಸ್ಕಾರವು ಯೋಗ ವ್ಯಾಯಾಮವಾಗಿದ್ದು. ಇದು ಯಾವುದೇ ಧರ್ಮದೊಂದಿಗೆ ಸಂಪರ್ಕ ಹೊಂದಿಲ್ಲವೆಂದು ಟ್ವಿಟ್ ಮಾಡಿದ್ದಾರೆ. ಅಂತೆಯೇ ಈ ಸೂರ್ಯ ನಮಸ್ಕಾರ ಕಾರ್ಯಕ್ರಮದ ವಿರುದ್ಧ ಮುಸ್ಲಿಂ ನಾಯಕರಾದ ಶಾಹರ್ ಖಾಜಿ ಮತ್ತು ಸಯ್ಯದ್ ಮುಶ್ತಾಕ್ ಅಲಿ ನದ್ವೀ ಪತ್ವಾ ಹೊರಡಿಸಿರುವುದನ್ನು ಟೀಕಿಸುತ್ತಾ ಇದೊಂದು ಬಿಜೆಪಿ ಮತ್ತು ಜಮಾತ್ ಇಸ್ಲಾಂ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಜರಿದಿದ್ದಾರೆ.

ಮಧ್ಯಪ್ರದೇಶ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಗುರುವಾರ ವಿಶ್ವದಾಖಲೆಯ 'ಸೂರ್ಯ ನಮಸ್ಕಾರ' ಮಾಡುವ ಕಾರ್ಯಕ್ರಮಕ್ಕೆ ಶತಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ, ಸೂರ್ಯ ನಮಸ್ಕಾರ ವಿರೋಧಿಸಿ ಮುಸ್ಲಿಮ್ ಮುಖಂಡರು ಫತ್ವಾ ಹೊರಡಿಸಿದ್ದರು.

ಸೂರ್ಯ ನಮಸ್ಕಾರ ಹಾಗೂ ದೇವರನ್ನು ಪೂಜಿಸುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಮುಸ್ಲಿಮ್ ಮುಖಂಡರು, ಇಸ್ಲಾಮ್ ಧರ್ಮದಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಮುಸ್ಲಿಮರು ಪಾಲ್ಗೊಳ್ಳಬಾರದು ಎಂದು ಹುಕುಂ ನೀಡಿರುವ ಶಾಹರ್ ಖ್ವಾಜಿ ಸೈಯದ್ ಮುಶ್ತಾಖ್ ಅಲಿ ನಾದ್ವಿ ಫತ್ವಾ ಹೊರಡಿಸಿದ್ದರು.

ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿ ಪ್ರಯತ್ನ ನಡೆಸಿದ್ದು, ಈ ಮೂಲಕ ಗಿನ್ನೆಸ್ ದಾಖಲೆ ಬರೆಯಬೇಕೆಂಬ ಇರಾದೆ ಹೊಂದಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿದ್ದವು.

ವೆಬ್ದುನಿಯಾವನ್ನು ಓದಿ