ಸೋನಿಯಾ ಆಸ್ತಿ ಬಹಿರಂಗಕ್ಕೆ ಸಿದ್ಧರೇ? ಉಮಾ ಭಾರತಿ ಪ್ರಶ್ನೆ

ಶನಿವಾರ, 26 ಫೆಬ್ರವರಿ 2011 (18:38 IST)
ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಪಕ್ಷದ ನಿಲುವುಗಳೇ ಎಂಬುದನ್ನು ಸೋನಿಯಾ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಆಗ್ರಹಿಸಿದ್ದಾರೆ.

ರಾಮದೇವ್ ಅವರ ಆಸ್ತಿ ವಿವರ ಮತ್ತು ಆದಾಯದ ಮೂಲವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯ ಮಾಡುತ್ತಿರುವುದು ಕಾಂಗ್ರೆಸ್ ನಿಲುವು ಆಗಿದ್ದರೆ, ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಹೊಂದಿರುವ ಆಸ್ತಿಯ ವಿವರಗಳನ್ನು ಕೂಡ ಘೋಷಿಸಬೇಕು ಎಂದು ಹಿಂದುತ್ವ ನಾಯಕಿ ಯೋಗ ಗುರುವನ್ನು ಸಮರ್ಥಿಸಿಕೊಂಡರು.

ಉಮಾ ಭಾರತಿಯವರು ತನ್ನ ಮಾತಿನಲ್ಲಿ ಯಾವುದೇ ಕಾಂಗ್ರೆಸ್ ನಾಯಕರನ್ನು ಹೆಸರಿಸಲಿಲ್ಲ. ಆದರೆ, ಕಪ್ಪುಹಣದ ಕುರಿತು ಕಾಂಗ್ರೆಸ್ಸನ್ನು ಗುರಿ ಮಾಡುವ ಮೊದಲು ಯೋಗ ಗುರು ಸ್ವಂತ ತನ್ನ ಆದಾಯದ ಮೂಲವನ್ನು ಬಹಿರಂಗಪಡಿಸಲಿ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದನ್ನು ಅವರು ಪರೋಕ್ಷವಾಗಿ ಉಲ್ಲೇಖಿಸಿದರು.

ರಾಮದೇವ್ ಅವರು ಅಸ್ತಿತ್ವಕ್ಕೆ ತರಲಿರುವ ನೂತನ ರಾಜಕೀಯ ಪಕ್ಷಕ್ಕೆ ತಾವು ಸೇರುತ್ತೀರಾ ಎಂದು ಬಿಜೆಪಿ ಮಾಜಿ ನಾಯಕಿಯನ್ನು ಪ್ರಶ್ನಿಸಿದಾಗ, ಆ ಬಗ್ಗೆ ಈಗಲೇ ಹೇಳುವುದು ಅಪಕ್ವವೆನಿಸಬಹುದು ಎಂದರು.

ತಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತಿಲ್ಲ ಎಂಬುದನ್ನೂ ಇದೇ ಸಂದರ್ಭದಲ್ಲಿ ಉಮಾ ಭಾರತಿ ಸ್ಪಷ್ಟಪಡಿಸಿದರು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿರುತ್ತೇನೆ ಎಂದು ನುಡಿದರು.

ಬಿಜೆಪಿಗೆ ಮರಳಲಿದ್ದಾರೆ ಎಂಬ ವರದಿಗಳನ್ನು ಇತ್ತೀಚೆಗಷ್ಟೇ ತಳ್ಳಿ ಹಾಕಿದ್ದ ಅವರು, ತಾನು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ರಹಿತವಾಗಿ ಹೋರಾಟ ಮಾಡಲಿದ್ದೇನೆ ಎಂದು ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ