ಹಣ ಒಡುವೆಗಳಿರಬಹುದು ಎಂದು ಕಳ್ಳ ಎಗರಿಸಿದ್ದ ಬ್ಯಾಗ್‌ನಲ್ಲಿ ಹಸುಗೂಸು ಪತ್ತೆ

ಗುರುವಾರ, 30 ಜನವರಿ 2014 (15:59 IST)
PR
ಮುಂಬೈನಿಂದ ಬೇಲಾಪುರ್‌ಗೆ ತೆರಳುವ ರೈಲಿನಲ್ಲಿ ಕಳ್ಳ ಕಿಶೋರ್ ಕಾಳೆ, ಹಣ, ಒಡುವೆಗಳಿರಬಹುದು ಎನ್ನುವ ಆಸೆಯಿಂದ ಪ್ರಯಾಣಿಕನೊಬ್ಬನ ಬ್ಯಾಗ್ ಎಗರಿಸುವಲ್ಲಿ ಸಫಲನಾಗುತ್ತಾನೆ. ಮುಂದಿನ ಕುರ್ಲಾ ರೈಲ್ವೆ ನಿಲ್ದಾಣದಲ್ಲಿಳಿದು ಬ್ಯಾಗ್‌ ತೆರೆದು ನೋಡಿದಾಗ ಹಣ, ಒಡುವೆ ಬದಲಿಗೆ ಹಸುಗೂಸು ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ.

ಬ್ಯಾಗ್‌ ನಿಲ್ದಾಣದಲ್ಲಿಯೇ ಬಿಟ್ಟು ಓಡುತ್ತಿರುವಾಗ ಟಿಕೆಟ್ ತಪಾಸಣೆ ಅಧಿಕಾರಿ ಅನುಮಾನದಿಂದಾಗಿ ಕಾಳೆಯವರನ್ನು ಹಿಡಿದು ವಿಚಾರಿಸುತ್ತಿರುವಾಗ ಜನಸಮೂಹ ಸುತ್ತುವರಿದಿರುವುದನ್ನು ಕಂಡು ಮತ್ತಷ್ಟು ಆತಂಕಗೊಂಡು ತಡವರಿಸಿದ್ದಾನೆ. ಜನರು ಒಂದು ಕಡೆ ಸೇರಿರುವುದನ್ನು ಕಂಡು ಪೊಲೀಸರು ಧಾವಿಸಿದ್ದಾರೆ.

ಕಿಶೋರ್ ಕಾಳೆಯನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಹಸುಗೂಸು ದೊರೆತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳ್ಳ ಕಿಶೋರ್ ಕಾಳೆ ಬ್ಯಾಗ್‌ನ ಜಿಪ್ ತೆಗೆಯದಿದ್ದಲ್ಲಿ ಮಗು ಉಸಿರುಗಟ್ಟಿ ಸಾಯುತ್ತಿತ್ತು. ಕಳ್ಳನ ದಯೆಯಿಂದ ಮಗು ಉಳಿದಂತಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ